ಶ್ರೀನಗರ: ಟಿಇಎಚ್ ಅಧ್ಯಕ್ಷ ಅಶ್ರಫ್ ಸೆಹ್ರಾಯ್ ಬಂಧನ

Update: 2020-07-13 16:10 GMT

ಶ್ರೀನಗರ, ಜು.13: ಪ್ರತ್ಯೇಕತಾವಾದಿ ನಾಯಕ ಮತ್ತು ತೆಹ್ರೀಕ್-ಇ-ಹುರಿಯತ್ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಸೆಹ್ರಾಯ್ ರನ್ನು ಪೊಲೀಸರು ರವಿವಾರ ಬಂಧಿಸಿದ್ದು, ಇವರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತೆ ಕಾಯ್ದೆ(ಪಿಎಸ್ಎ)ಯಡಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

   ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಪ್ರಥಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಲವು ನಾಯಕರನ್ನು ಬಂಧಿಸಲಾಗಿದ್ದು ಇವರ ವಿರುದ್ಧವೂ ಪಿಎಸ್ಎ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಪಿಎಸ್ಎಯಡಿ, ಒಂದು ವರ್ಷದವರೆಗೆ ವಿಚಾರಣೆಯಿಲ್ಲದೆ ಬಂಧನದಲ್ಲಿಡಲು ಅಧಿಕಾರವಿದೆ. ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ.

 ತೆಹ್ರೀಕ್-ಇ-ಹುರಿಯತ್ ಸಂಘಟನೆ ಹುರಿಯತ್ ಕಾನ್ಫರೆನ್ಸ್ ನ ಘಟಕವಾಗಿದ್ದು, ಈ ಹಿಂದೆ ಅಲಿ ಶಾ ಗೀಲಾನಿ ಅಧ್ಯಕ್ಷರಾಗಿದ್ದರು. ಹಿಜ್ಬುಲ್ ಮುಜಾಹಿದೀನ್ ನ ವಿಭಾಗೀಯ ಕಮಾಂಡರ್ ಆಗಿದ್ದ ಜುನೈದ್ ಸೆಹ್ರಾಯ್ ಅಶ್ರಫ್ ಸೆಹ್ರಾಯ್ ಪುತ್ರನಾಗಿದ್ದು 2020ರ ಮೇಯಲ್ಲಿ ಶ್ರೀನಗರದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಎನ್ಕೌಂಟರ್ನಲ್ಲಿ ಹತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News