ಕೇರಳ ಕ್ರೈಸ್ತ ಭಗಿನಿ ಅತ್ಯಾಚಾರ ಪ್ರಕರಣದ ಆರೋಪಿ ಫ್ರಾಂಕೊ ಮುಲಕ್ಕಲ್‍ ಗೆ ಕೊರೋನ ದೃಢ

Update: 2020-07-14 11:24 GMT

ಹೊಸದಿಲ್ಲಿ: ಕೇರಳದ ಕ್ರೈಸ್ತ ಭಗಿನಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿಯಾಗಿರುವ ಜಲಂಧರ್ ಧರ್ಮಪ್ರಾಂತ್ಯದ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ಗೆ ಕೊರೋನ ಸೋಂಕು ದೃಢಪಟ್ಟಿದೆ. ಮುಲಕ್ಕಲ್ ಆರೋಗ್ಯ ಸ್ಥಿತಿ ಅಷ್ಟೊಂದೇನೂ ಉತ್ತಮವಾಗಿಲ್ಲ ಎಂದು ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಪೀಟರ್ ಹೇಳಿದ್ದಾರೆ.

ಕೋವಿಡ್-19 ಸೋಂಕಿತ ವ್ಯಕ್ತಿಯೊಬ್ಬರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣ ಮುಲಕ್ಕಲ್ ಅವರು ಸ್ವಯಂ ಕ್ವಾರಂಟೈನ್ ಆಗಿರುವುದರಿಂದ ಅವರಿಗೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ ಎಂದು ಮುಲಕ್ಕಲ್ ವಕೀಲರು ಸೋಮವಾರ ಕೇರಳ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಹಿಂದಿನ ವಿಚಾರಣೆ ಜುಲೈ 1ರಂದು ನಡೆದ ಸಂದರ್ಭವೂ ಮುಲಕ್ಕಲ್ ಹಾಜರಾಗಲು ವಿಫಲನಾಗಿದ್ದ.  ಪಂಜಾಬ್‍ ನ ಜಲಂಧರ್‍ ನಲ್ಲಿ ಕೋವಿಡ್-19 ಕಂಟೈನ್ಮೆಂಟ್ ವಲಯದಲ್ಲಿರುವುದರಿಂದ ಅವರಿಗೆ ಹಾಜರಾಗಲು ಆಗಿಲ್ಲ ಎಂದು ಆಗ ವಕೀಲರು ಕಾರಣ ನೀಡಿದ್ದರು.

ಆದರೆ ಸೋಮವಾರದ ವಿಚಾರಣೆ ವೇಳೆ ಪ್ರಾಸಿಕ್ಯೂಶನ್ ಪರ ವಕೀಲರು ಮೇಲಿನ ವಾದವನ್ನು ತಿರಸ್ಕರಿಸಿದ್ದರಲ್ಲದೆ  ಮುಲಕ್ಕಲ್  ವಾಸಿಸುತ್ತಿರುವ ಸ್ಥಳ ಜುಲೈ 1ರಂದು ಕಂಟೈನ್ಮೆಂಟ್ ವಲಯವಾಗಿರಲಿಲ್ಲ ಎಂದಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಮುಲಕ್ಕಲ್ ಉದ್ದೇಶಪೂರ್ವಕವಾಗಿ ವಿಚಾರಣೆ ವಿಳಂಬಿಸುತ್ತಿದ್ದಾರೆಂದು ಹೇಳಿ ಜಾಮೀನನ್ನು ರದ್ದುಗೊಳಿಸಿತಲ್ಲದೆ ಪ್ರಕರಣದ ವಿಚಾರಣೆ ಆಗಸ್ಟ್ 13ಕ್ಕೆ ಮುಂದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News