ಶೇ.60ರಷ್ಟು ಜಮೀನು ಸ್ವಾಧೀನಗೊಂಡರೂ 2023ರಲ್ಲಿ ಬುಲೆಟ್ ಟ್ರೈನ್ ಯೋಜನೆ ಪೂರ್ಣಗೊಳ್ಳುವುದು ಸಂಶಯ

Update: 2020-07-14 13:28 GMT

ಹೊಸದಿಲ್ಲಿ : ಮಹಾರಾಷ್ಟ್ರ ಸರಕಾರದ ತೀವ್ರ ವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಅಹ್ಮದಾಬಾದ್-ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಗಾಗಿ ಅಗತ್ಯವಿರುವ ಶೇ. 60ರಷ್ಟು ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಈ ಯೋಜನೆ ನಿಗದಿತ ಗುರಿಯಾದ ಡಿಸೆಂಬರ್ 2023ರೊಳಗಾಗಿ ಪೂರ್ಣಗೊಳ್ಳುವುದು ಮಾತ್ರ ಸಂಶಯವಾಗಿದೆ ಎಂದು thewire.in ವರದಿ ಮಾಡಿದೆ.

ಈ ಯೋಜನೆಗೆ ಒಟ್ಟು  1,380.08 ಹೆಕ್ಟೇರ್ ಜಮೀನು ಅಗತ್ಯವಿದ್ದು, ಇದರ ಪೈಕಿ  1,004.91 ಹೆಕ್ಟೇರ್ ಖಾಸಗಿ ಜಮೀನು ಆಗಿದೆ. ಇಲ್ಲಿಯ ತನಕ ಈ ಯೋಜನೆಯ ಜಾರಿಯ ಉಸ್ತುವಾರಿ ಹೊತ್ತ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿ. 820ರಿಂದ 830 ಹೆಕ್ಟೇರ್ ಜಮೀನು ಸ್ವಾಧೀನಪಡಿಸಿಕೊಂಡಿದೆ. ಒಟ್ಟಾರೆಯಾಗಿ ಯೋಜನೆಗೆ ಅಗತ್ಯವಿರುವ ಶೇ. 60ರಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆಯಾದರೂ ಗುಜರಾತ್ ರಾಜ್ಯದಲ್ಲಿ ಅಗತ್ಯವಿರುವ ಶೇ 77ರಷ್ಟು ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು  ಕಾರ್ಪೊರೇಷನ್ ಆಡಳಿತ ನಿರ್ದೇಶಕ ಅಚಲ್ ಖರೆ ಹೇಳುತ್ತಾರೆ.

ಈ ಯೋಜನೆಯ ಒಟ್ಟು ವೆಚ್ಚ 1.08 ಶತಕೋಟಿ ಡಾಲರ್ ಆಗಿದ್ದರೆ ಒಟ್ಟು ಸಾಲದ ಮೊತ್ತವಾದ ರೂ. 88,000 ಕೋಟಿ ಪೈಕಿ ರೂ 15,000 ಕೋಟಿ ಸಾಲವನ್ನು ಜಪಾನ್ ಇಂಟರ್ ನ್ಯಾಷನಲ್ ಕೊ-ಆಪರೇಷನ್ ಏಜನ್ಸಿ ಒದಗಿಸುತ್ತಿದೆ.

ಜಪಾನೀಸ್ ಯೆನ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ  ಯೋಜನೆಯ ವೆಚ್ಚವೂ ಹೆಚ್ಚಬಹುದೆಂಬ ಆತಂಕವಿದೆ. ಇದು ಸಾಲದೆಂಬಂತೆ ಮಹಾರಾಷ್ಟ್ರದ ರೈತರು ಯೋಜನೆಗಾಗಿ ಸ್ವಾಧೀನಗೊಳ್ಳಲಿರುವ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದಾರೆ.

ಮಹಾರಾಷ್ಟ್ರ ಸರಕಾರ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ, ಸರಕಾರ ಕೆಲವೊಂದು ನಿಯಮಗಳಿಗೆ ತಿದ್ದುಪಡಿ ಮಾಡಿ  ಜಮೀನು ಸ್ವಾಧೀನ ಪ್ರಕ್ರಿಯೆ  ಆರಂಭಿಸಲು ಅನುವು ಮಾಡಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News