​ಮಾರಾಟವಾಗಿ ಬೇರ್ಪಟ್ಟಿದ್ದ ಹಸು-ಗೂಳಿಯನ್ನು ಮತ್ತೆ ಒಂದುಗೂಡಿಸಿದ ಉಪಮುಖ್ಯಮಂತ್ರಿಯ ಪುತ್ರ

Update: 2020-07-15 14:34 GMT
  ಫೋಟೊ ಕೃಪೆ: www.dailythanthi.com

ಚೆನ್ನೈ, ಜು. 15: ತನ್ನ ಜೊತೆಗಿದ್ದ ಹಸು ಮಾರಾಟವಾಗಿ ಅದನ್ನು ಕೊಂಡೊಯ್ಯುತ್ತಿದ್ದಾಗ ವಾಹನವನ್ನು ಗೂಳಿಯೊಂದು ಗಂಟೆಗಳ ಕಾಲ ತಡೆದು ನಿಲ್ಲಿಸಿದ ಘಟನೆ ಮಧುರೈಯ ಪಾಲಮೇಡುನಲ್ಲಿ ನಡೆದಿದೆ. ಹಸುವನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಗೂಳಿ  ತಡೆದಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಮಂಜಮಲಿ ಹೆಸರಿನ ಗೂಳಿ ಮಧುರೈಯ ಪಾಲಮೇರು ದೇವಾಲಯದಲ್ಲೇ ಲಕ್ಷ್ಮೀ ಎಂಬ ಹಸುವಿನ ಜೊತೆಗೆ ಬೆಳೆದಿತ್ತು. ಲಾಕ್ ಡೌನ್ ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹಸುವಿನ ಮಾಲಕ ಮುಂಜವಂಡಿ ಹಸುವನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಖರೀದಿಸಿದ ವ್ಯಕ್ತಿ ಹಸುವನ್ನು ಸಣ್ಣ ವ್ಯಾನ್ ನಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭ ಮಂಜಮಲಿ ಆ ವ್ಯಾನನ್ನು ಗಂಟೆಗಳ ಕಾಲ ತಡೆದು ನಿಲ್ಲಿಸಿತು. ನಂತರ ಹಸುವನ್ನು ವಾಹನದಲ್ಲಿ ಕೊಂಡೊಯ್ದಾಗ ಗೂಳಿ ಆ ವಾಹನವನ್ನು ಒಂದು ಕಿಲೋಮೀಟರ್ ವರೆಗೆ ಹಿಂಬಾಲಿಸಿತ್ತು.
ಈ ಗೂಳಿ ಹಾಗೂ ಹಸುವಿನ ವಾತ್ಸಲ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ತಮಿಳುನಾಡು ಉಪ ಮುಖ್ಯಮಂತ್ರಿ ಪುತ್ರ ಮಧ್ಯೆ ಪ್ರವೇಶಿಸಿದ್ದಾರೆ. ಉಪ ಮುಖ್ಯಮಂತ್ರಿ ಪುತ್ರ ಒ.ಪಿ. ಜಯಪ್ರದೀಪ್ ಕೂಡಲೇ ಹಸುವನ್ನು ಖರೀದಿಸಿದವರನ್ನು ಸಂಪರ್ಕಿಸಿದ್ದಾರೆ ಹಾಗೂ ಅವರಿಗೆ ಹಣ ನೀಡಿ ಹಸುವನ್ನು ಹಿಂದೆ ಕರೆ ತಂದಿದ್ದಾರೆ. ಈಗ ಹಸು ಗೂಳಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News