ನಿರರ್ಗಳ ಇಂಗ್ಲಿಷ್ ಮಾತು, ಸುಂದರವಾಗಿದ್ದರಷ್ಟೇ ಸಾಲದು: ಪೈಲಟ್ ಗೆ ಕುಟುಕಿದ ಗೆಹ್ಲೋಟ್

Update: 2020-07-15 14:38 GMT

ಜೈಪುರ, ಜು.15: ‘ಉತ್ತಮವಾಗಿ ಇಂಗ್ಲಿಷ್ ಮಾತನಾಡುವುದು, ಉತ್ತಮ ಉಲ್ಲೇಖಗಳನ್ನು ನೀಡುವುದು ಮತ್ತು ಸುಂದರವಾಗಿದ್ದರಷ್ಟೇ ಸಾಲದು. ದೇಶಕ್ಕಾಗಿ ನಿಮ್ಮ ಹೃದಯದಲ್ಲಿ ಏನಿದೆ, ನಿಮ್ಮ ಸಿದ್ಧಾಂತ, ಕಾರ್ಯನೀತಿ, ಬದ್ಧತೆ ಇವೆಲ್ಲವೂ ಮುಖ್ಯವಾಗಿರುತ್ತದೆ’ ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ , ಪರೋಕ್ಷವಾಗಿ ಸಚಿನ್ ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 ಕಾಂಗ್ರೆಸ್ ನಲ್ಲಿ ಸಚಿನ್ ಪೈಲಟ್ ಎಬ್ಬಿಸಿದ್ದ ಬಂಡಾಯದ ಬಿರುಗಾಳಿ ಸದ್ಯಕ್ಕೆ ಶಮನಗೊಂಡಂತೆ ಭಾಸವಾಗಿರುವುದರಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರಾಳರಾಗಿದ್ದು, ಭಿನ್ನಾಭಿಪ್ರಾಯ ಹೊಂದಿರುವ ಸಚಿನ್ ಪೈಲಟ್ ಮತ್ತವರ ಬೆಂಬಲಿಗರ ವಿರುದ್ಧ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದ್ದಾರೆ.

“ಚಿನ್ನದಿಂದ ಮಾಡಿರುವ ಚೂರಿಯನ್ನು ಊಟದ ತಟ್ಟೆಯಲ್ಲಿಟ್ಟರೆ ಏನು ಪ್ರಯೋಜನ. ಇದರಿಂದ ಊಟ ಮಾಡಲು ಸಾಧ್ಯವೇ. ನಾನು ಯಾವುದನ್ನು ಉದ್ದೇಶಿಸಿ ಹೇಳುತ್ತಿದ್ದೇನೆ ಎಂಬುದು ನಿಮಗೆ ತಿಳಿದಿದೆಯಷ್ಟೇ” ಎಂದು ಪ್ರಶ್ನಿಸಿರುವ ಗೆಹ್ಲೋಟ್, “ನಾನು 40 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ನನಗೆ ರಾಜಕೀಯ ಕ್ಷೇತ್ರದಲ್ಲಿರುವ ಅನುಭವದಷ್ಟೂ ವಯಸ್ಸಾಗದ ಹೊಸ ಪೀಳಿಗೆ ಅವಸರ ಪಡಬಾರದು. ಮುಂದಿನ ದಿನಗಳು ಅವರದ್ದೇ. ನಾವು ಕೂಡಾ ಯುವಕರಾಗಿದ್ದೆವು. ಆಗ ನಾವು ಯಾವ ರೀತಿ ನಡೆದುಕೊಂಡಿದ್ದೆವು ಎಂಬುದನ್ನು ಸ್ವಲ್ಪ ನೋಡಿ ಕಲಿತರೆ ಅವರು ಕೂಡಾ ಕೇಂದ್ರ ಸಚಿವರಾಗಬಹುದು, ರಾಜ್ಯಾಧ್ಯಕ್ಷರಾಗಬಹುದು” ಎಂದು ಗೆಹ್ಲೋಟ್ ಹೇಳಿದ್ದಾರೆ.

 ರಾಜಸ್ತಾನದಲ್ಲಿ ಬಿಜೆಪಿ ಕುದುರೆ ವ್ಯಾಪಾರ(ಶಾಸಕರ ಖರೀದಿ)ಕ್ಕೆ ಇಳಿದಿತ್ತು. ಅನಿವಾರ್ಯವಾಗಿ ನಮ್ಮ ಶಾಸಕರನ್ನು 10 ದಿನ ರೆಸಾರ್ಟ್ನಲ್ಲಿರಿಸಬೇಕಾಯಿತು. ಹೀಗೆ ಮಾಡಿರದಿದ್ದರೆ, ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರಕ್ಕೆ ಆದ ಗತಿಯೇ ನಮ್ಮ ಸರಕಾರಕ್ಕೆ ಎದುರಾಗುತ್ತಿತ್ತು. ಪೈಲಟ್ ಜೊತೆ ಬಂಡಾಯ ಶಾಸಕರಿಗೆ ಬಿಜೆಪಿ ಆಮಿಷವೊಡ್ಡಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

200 ಸದಸ್ಯಬಲದ ವಿಧಾನಸಭೆಯಲ್ಲಿ ತನಗೆ 106 ಶಾಸಕರ ಬೆಂಬಲವಿದ್ದು ಸರಕಾರ ಸುಭದ್ರವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News