ಹೆತ್ತವರಿಗೆ ಕೊರೋನ ಸೋಂಕು: ಒಂದು ತಿಂಗಳು ಮಗುವಿನ ಆರೈಕೆ ಮಾಡಿದ ಕೇರಳದ ವೈದ್ಯೆ ಡಾ. ಮೇರಿ

Update: 2020-07-16 08:40 GMT

ಎರ್ಣಾಕುಳಂ: ಆರು ತಿಂಗಳ ಹಸುಗೂಸಿನ ಹೆತ್ತವರಿಬ್ಬರಿಗೂ ಕೋವಿಡ್-19 ಸೋಂಕು ತಗಲಿದ ನಂತರ ಸಂಬಂಧಿಕರೂ ಶಿಶುವನ್ನು ನೋಡಿಕೊಳ್ಳಲು ಹಿಂದೇಟು ಹಾಕಿದ ಸಂದರ್ಭದಲ್ಲಿ ಕೇರಳದ ವೈದ್ಯೆ ಡಾ. ಮೇರಿ ಅನಿತಾ ತಾವೇ ಸ್ವತಃ ಒಂದು ತಿಂಗಳು ಆ ಶಿಶುವಿನ ಆರೈಕೆ ಮಾಡಿ ಹೃದಯವೈಶಾಲ್ಯ ಮೆರೆದಿದ್ದಾರೆ.

ಬುಧವಾರ ಅವರು ಶಿಶುವನ್ನು ಹೆತ್ತವರಿಗೆ ಹಸ್ತಾಂತರಿಸಿದ್ದಾರೆ. ಮಗುವಿನ ಹೆತ್ತವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಂತರ ಗೃಹ ಕ್ವಾರಂಟೈನ್ ಅವಧಿ ಮುಗಿಸಿದ ನಂತರ ಶಿಶುವನ್ನು ಅವರಿಗೆ ಹಸ್ತಾಂತರಿಸಿದ್ದಾರೆ ಡಾ. ಮೇರಿ.

ಮಗುವಿನ ಹೆತ್ತವರು ಗುರ್ಗಾಂವ್‍ ನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಮಗುವಿನ ತಂದೆಗೆ ಕೋವಿಡ್ 19 ದೃಢಪಟ್ಟ ನಂತರ ತಾಯಿ ಮಗುವಿನ ಜತೆಗೆ ಕೇರಳಕ್ಕೆ ಬಂದಿದ್ದರು. ಕೊಚ್ಚಿಯ ಮನೆಯಲ್ಲಿ ಕ್ವಾರಂಟೈನ್‍ ನಲ್ಲಿದ್ದ ವೇಳೆ ತಾಯಿಗೂ ಕೋವಿಡ್ 19 ದೃಢಗೊಂಡಿತ್ತು. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇದ್ದಾಗ ಮಕ್ಕಳ ಕಲ್ಯಾಣ ಸಮಿತಿ ಡಾ. ಮೇರಿ ಅವರ ಸಹಾಯ ಯಾಚಿಸಿತ್ತು. ಮಗುವಿಗೂ ಸೋಂಕು ತಗಲುವ ಭೀತಿ ಅಧಿಕವಾಗಿದ್ದರೂ ಅದನ್ನು ನೋಡಿಕೊಳ್ಳಲು ಡಾ. ಮೇರಿ ಮುಂದೆ  ಬಂದಿದ್ದರು.

ತಾವಿರುವ ಕಟ್ಟಡದಲ್ಲಿಯೇ ಖಾಲಿಯಾಗಿದ್ದ ಫ್ಲ್ಯಾಟಿನಲ್ಲಿ ಅವರು ಮಗುವಿನ ಜತೆ ವಾಸಿಸಲು ಆರಂಭಿಸಿದ್ದರು. ಅವರ ಮೂವರು  ಮಕ್ಕಳು ಪ್ರತಿ ದಿನ ಆಹಾರವನ್ನು ಅವರ ಫ್ಲ್ಯಾಟ್ ಹೊರಗಡೆ ಇಟ್ಟು ಹೋಗುತ್ತಿದ್ದರು,. ಮಗು ತನ್ನ ಜತೆಗಿದ್ದರೂ ಪ್ರತಿ ದಿನ ಅವರು ಗುರ್ಗಾಂವ್‍ ನಲ್ಲಿದ್ದ ಮಗುವಿನ ತಂದೆ ಹಾಗೂ ಕೊಚ್ಚಿಯಲ್ಲಿದ್ದ ಮಗುವಿನ ತಾಯಿ ಜತೆ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು.

ಇದೀಗ ಮಗು ಸುರಕ್ಷಿತವಾಗಿ ತಮ್ಮ ಕೈಸೇರಿದ ನಂತರ ಎಲ್ವಿನ್ ಹೆತ್ತವರು ಡಾ ಮೇರಿ ಅವರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ. ಕ್ಲಿನಿಕಲ್ ಮನೋರೋಗ ತಜ್ಞೆಯಾಗಿರುವ ಡಾ. ಮೇರಿ ಕೊಚ್ಚಿಯಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಒಂದು ಸಂಘಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News