ಕುಲಭೂಷಣ್ ಜಾಧವ್ ರಾಜತಾಂತ್ರಿಕ ಭೇಟಿಗೆ ಮತ್ತೊಂದು ಅವಕಾಶ ಪಡೆದ ಭಾರತ

Update: 2020-07-16 14:59 GMT

ಇಸ್ಲಾಮಾಬಾದ್, ಜು. 16: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಮರಣ ದಂಡನೆಗೆ ಒಳಗಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಗುರುವಾರ ಭಾರತೀಯ ರಾಜತಾಂತ್ರಿಕರನ್ನು ಭೇಟಿಯಾಗಿದ್ದಾರೆ. ಇದು ಅವರಿಗೆ ಭಾರತೀಯ ರಾಜತಾಂತ್ರಿಕರನ್ನು ಭೇಟಿಯಾಗಲು ಲಭಿಸಿದ ಎರಡನೇ ಅವಕಾಶವಾಗಿದೆ.

ಭಾರತೀಯ ರಾಜತಾಂತ್ರಿಕರಿಗೆ ಜಾಧವ್ ರನ್ನು ಭೇಟಿಯಾಗಲು ಪಾಕಿಸ್ತಾನದ ಅಧಿಕಾರಿಗಳು ಎರಡು ಗಂಟೆಗಳ ಅವಕಾಶವನ್ನು ಒದಗಿಸಿದರು. ಮೊದಲ ರಾಜತಾಂತ್ರಿಕ ಭೇಟಿ 2019 ಸೆಪ್ಟಂಬರ್ ನಲ್ಲಿ ನಡೆದಿತ್ತು.
ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಜುಲೈ 20ರ ಗಡುವಿನೊಳಗೆ ಜಾಧವ್ ರ ನಿಶ್ಶರ್ತ ಭೇಟಿಗೆ ಭಾರತೀಯ ರಾಜತಾಂತ್ರಿಕರಿಗೆ ಅವಕಾಶ ನೀಡಬೇಕು ಭಾರತವು ಪಾಕಿಸ್ತಾನವನ್ನು ಕೇಳಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಕುಲಭೂಷಣ್ ಜಾಧವ್ ತನ್ನ ಶಿಕ್ಷೆಯನ್ನು ಮರುಪರಿಶೀಲಿಸಲು ಕೋರಿ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ, ಬದಲಿಗೆ ದಯಾ ಅರ್ಜಿ ಸಲ್ಲಿಸಲು ಬಯಸಿದ್ದಾರೆ ಎಂದು ಕಳೆದ ವಾರ ಪಾಕಿಸ್ತಾನ ಹೇಳಿತ್ತು.
ಆದರೆ, ಇದನ್ನು ನಿರಾಕರಿಸಿರುವ ಭಾರತವು, ಇದು ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಪಾಕಿಸ್ತಾನ ಹಿಂದೇಟು ಹಾಕುತ್ತಿರುವುದಕ್ಕೆ ಪುರಾವೆಯಾಗಿದೆ ಎಂದು ಹೇಳಿತ್ತು.
ಕುಲಭೂಷಣ್ ಜಾಧವ್ ರಿಗೆ ನೀಡಲಾಗಿರುವ ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಕಳೆದ ವರ್ಷದ ಜುಲೈಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಪಾಕಿಸ್ತಾನಕ್ಕೆ ಸೂಚಿಸಿತ್ತು ಹಾಗೂ ಈ ಅವಧಿಯಲ್ಲಿ ಅವರ ಮರಣ ದಂಡನೆಯನ್ನು ಅಮಾನತಿನಲ್ಲಿಟ್ಟಿತ್ತು.
ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ರನ್ನು ಪಾಕಿಸ್ತಾನ 2016 ಮಾರ್ಚ್ ನಲ್ಲಿ ಬಂಧಿಸಿದೆ ಹಾಗೂ ಅವರ ವಿರುದ್ಧ ಬೇಹುಗಾರಿಕೆಯ ಆರೋಪವನ್ನು ಹೊರಿಸಿದೆ. ಈ ಆರೋಪವನ್ನು ಭಾರತ ತಳ್ಳಿಹಾಕಿದೆ. ಒಂದು ವರ್ಷದ ಬಳಿಕ ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದು ಅವರಿಗೆ ಮರಣ ದಂಡನೆ ವಿಧಿಸಿದೆ.
2017 ಎಪ್ರಿಲ್ ನಲ್ಲಿ, ಪಾಕಿಸ್ತಾನದ ಸೇನಾ ನ್ಯಾಯಾಲಯದ ತೀರ್ಪನ್ನು ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಮುಂದಿನ ತಿಂಗಳು ನ್ಯಾಯಾಲಯವು ಅವರ ಮರಣ ದಂಡನೆಗೆ ತಡೆಯಾಜ್ಞೆ ನೀಡಿತು.
ಜಾಧವ್ ರನ್ನು ಬಲೂಚಿಸ್ತಾನದಿಂದ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡರೆ, ಅವರನ್ನು ಪಾಕಿಸ್ತಾನವು ಇರಾನ್ನಿಂದ ಅಪಹರಿಸಿದೆ ಎಂದು ಭಾರತ ತಿಳಿಸಿದೆ. ನೌಕಾಪಡೆಯಿಂದ ನಿವೃತ್ತರಾದ ಬಳಿಕ, ಜಾಧವ್ ಇರಾನ್ ನಲ್ಲಿ ವ್ಯಾಪಾರ ನಡೆಸುತ್ತಿದ್ದರು ಎಂದು ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News