×
Ad

ನೇಪಾಳಿ ಪ್ರಜೆಯ ತಲೆ ಬೋಳಿಸಿ, ‘ಜೈ ಶ್ರೀ ರಾಮ್’ ಹೇಳಲು ಬಲವಂತಪಡಿಸಿದ ದುಷ್ಕರ್ಮಿಗಳು

Update: 2020-07-17 20:12 IST

ವಾರಣಾಸಿ: ದುಷ್ಕರ್ಮಿಗಳ ತಂಡವೊಂದು ನೇಪಾಳಿ ಪ್ರಜೆಯೊಬ್ಬರ ತಲೆ ಬೋಳಿಸಿ, ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಬಲವಂತಪಡಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಶ್ರೀ ರಾಮ ಹುಟ್ಟಿದ್ದು ನೇಪಾಳದಲ್ಲಿ  ಎಂದು ನೇಪಾಳ ಪ್ರಧಾನಿ ಕೆ.ಪಿ. ಹೇಳಿಕೆ ನೀಡಿದ ಕೆಲ ದಿನಗಳಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

“ಘಟನೆಗೆ ಸಂಬಂಧಿಸಿ ಒಬ್ಬನನ್ನು ಬಂಧಿಸಿದ್ದೇವೆ. ಇತರರನ್ನು ಗುರುತಿಸಲಾಗಿದೆ. ನಾವು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ವಾರಣಾಸಿ ಪೊಲೀಸ್ ಮುಖ್ಯಸ್ಥ ಅಮಿತ್ ಪಾಥಕ್ ಮಾಹಿತಿ ನೀಡಿದ್ದಾರೆ.

ವಾರಣಾಸಿಯ ನದಿಯೊಂದರ ಬಳಿ ಈ ಘಟನೆ ನಡೆದಿದ್ದು ದಾಳಿ ನಡೆಸಿದ ವಿಶ್ವಹಿಂದೂ ಸೇನಾದ ಸಂಯೋಜಕ ಅರುಣ್ ಪಾಠಕ್ ಘಟನೆಯ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ನೇಪಾಳಿ ವ್ಯಕ್ತಿಯ ಶರ್ಟ್ ಬಿಚ್ಚಿಸಿ, ಆತನ ತಲೆಬೋಳಿಸಿದ ಬಳಿಕ ಜೈಶ್ರೀರಾಂ ಎಂದು ಘೋಷಿಸುವಂತೆ ಹಾಗೂ ನೇಪಾಳಿ ಪ್ರಧಾನಿ ಕೆಪಿ ಶರ್ಮ ಒಲಿ ವಿರುದ್ಧ ಘೋಷಣೆ ಕೂಗುವಂತೆ ಬಲವಂತಗೊಳಿಸಲಾಗಿದೆ. ಅಲ್ಲದೆ ನೇಪಾಳಿ ವ್ಯಕ್ತಿಯ ತಲೆಯ ಮೇಲೆ ಜೈಶ್ರೀರಾಂ ಎಂದು ಬರೆಯುವಂತೆ ಪಾಠಕ್ ತನ್ನ ಬೆಂಬಲಿಗರಿಗೆ ಹೇಳುತ್ತಿರುವುದೂ ವೀಡಿಯೊದಲ್ಲಿ ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News