×
Ad

ಕೊರೋನ ಗೆದ್ದ 85 ವರ್ಷದ ಕ್ಯಾನ್ಸರ್ ಪೀಡಿತ ವೃದ್ಧ ಮತ್ತು ಪತ್ನಿ

Update: 2020-07-18 19:59 IST

ಕೇಂದ್ರಪಾರ (ಒರಿಸ್ಸಾ), ಜು. 18: ಒರಿಸ್ಸಾದ ಕೇಂದ್ರಪಾರ ಜಿಲ್ಲೆಯಲ್ಲಿ ವೃದ್ಧರಾಗಿರುವ ಕ್ಯಾನ್ಸರ್ ರೋಗಿ ಹಾಗೂ ಅವರ ಪತ್ನಿ ಕೊರೋನ ಗೆದ್ದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ 85 ವರ್ಷದ ಸುರೇಂದ್ರ ಪಾಟಿ ಹಾಗೂ 78 ವರ್ಷದ ಅವರ ಪತ್ನಿ ಸಾಬಿತ್ರಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. 

“ಇಬ್ಬರನ್ನು ಕೇಂದ್ರಪಾರ ಜಿಲ್ಲೆಯಲ್ಲಿರುವ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೊರೋನ ಸೋಂಕನ್ನು ಗೆಲ್ಲುವಲ್ಲಿ ಅವರು ಹಲವರಿಗೆ ಪ್ರೇರಣೆಯಾಗಿದ್ದಾರೆ. ನಾವು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ” ಎಂದು ಕೇಂದ್ರಪಾರದ ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.

ಸುರೇಂದ್ರ ಪಾಟಿ ಅವರು ಕಿಮೋಥೆರಪಿಗಾಗಿ ಜೂನ್ 8ರಂದು ಕತಕ್ ನಲ್ಲಿರುವ ಆಚಾರ್ಯ ಹರಿಹರ ರೀಜನಲ್ ಕ್ಯಾನ್ಸರ್ ಸೆಂಟರ್ ಗೆ ದಾಖಲಾಗಿದ್ದರು. ಪತ್ನಿ ಸಾವಿತ್ರಿ ಅವರು ಸುರೇಂದ್ರ ಪಾಟಿಯನ್ನು ನೋಡಿಕೊಳ್ಳುತ್ತಿದ್ದರು. ಜೂನ್ 29ರಂದು ಇವರಿಬ್ಬರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತ್ತು ಎಂದು ಕೇಂದ್ರಪಾರದ ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿ ಎಂ.ಎಂ. ಬೇಗ್ ತಿಳಿಸಿದ್ದಾರೆ. ಕೂಡಲೇ ವೃದ್ಧ ದಂಪತಿಯನ್ನು ಕೊರೋನಕ್ಕೆ ನಿಯೋಜಿತ ಕತಕ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 10 ದಿನಗಳ ಚಿಕಿತ್ಸೆ ಬಳಿಕ ಅವರು ಗುಣಮುಖರಾಗಿದ್ದರು ಎಂದು ಅವರು ತಿಳಿಸಿದ್ದಾರೆ. 

ಅನಂತರ ದಂಪತಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರಪಾರ ಬ್ಲಾಕ್ ನ ಬಾಗಡ ಗ್ರಾಮ ಪಂಚಾಯತ್ ಪ್ರದೇಶದಲ್ಲಿರುವ ಕೊರೋನಾ ಕೇರ್ ಸೆಂಟರ್ ನಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ಅವರು ಶುಕ್ರವಾರ ಬಿಡುಗಡೆಯಾಗಿದ್ದಾರೆ ಎಂದು ಬೇಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News