ದೇಶದಲ್ಲಿ 15,000ಕ್ಕೂ ಅಧಿಕ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನ ಸೋಂಕು: ವರದಿ
ಹೊಸದಿಲ್ಲಿ, ಜು.18: ದೇಶದಲ್ಲಿ ಕೊರೋನ ಸೋಂಕಿನಿಂದ ಬಾಧಿತರಾದ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರ ಸಂಖ್ಯೆ 15,000ಕ್ಕೂ ಅಧಿಕವಾಗಿದ್ದು ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ) ಸೇರಿದಂತೆ ಸುರಕ್ಷಾ ಸಾಧನಗಳ ಕೊರತೆಯನ್ನು ಇದು ತೋರಿಸುತ್ತದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇದರಲ್ಲಿ ಕರ್ತವ್ಯದಲ್ಲಿರುವಾಗಲೇ ಸೋಂಕಿಗೆ ಒಳಗಾದ ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯಸೇವಾ ಸಿಬ್ಬಂದಿ ಸಹಿತ ಆರೋಗ್ಯ ಸೇವಾ ಕಾರ್ಯಕರ್ತರ ಸಂಖ್ಯೆ 5,000ಕ್ಕೂ ಅಧಿಕವಾಗಿದೆ ಎಂದು ಸರಕಾರದ ಅಪೂರ್ಣ ಅಂಕಿಅಂಶವನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ)ನ ಮುಖ್ಯಸ್ಥ ಡಾ ರಾಜನ್ ಶರ್ಮ ಇತ್ತೀಚೆಗೆ ಬಿಡುಗಡೆಗೊಳಿಸಿದ ನ್ಯಾಷನಲ್ ಕೋವಿಡ್ ರಿಜಿಸ್ಟರ್ನ ಅಂಕಿಅಂಶದ ಪ್ರಕಾರ ದೇಶದಲ್ಲಿ 1,302 ವೈದ್ಯರು ಕೊರೋನ ಸೋಂಕಿಗೆ ಒಳಗಾಗಿದ್ದು 93 ವೈದ್ಯರು ಮೃತರಾಗಿದ್ದಾರೆ. ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ತಮ್ಮ ಸುರಕ್ಷತೆಗೆ ಗಮನ ನೀಡುವಂತೆ ಐಎಂಎ ರೆಡ್ ಅಲರ್ಟ್ ಸೂಚನೆ ನೀಡಿದೆ.