×
Ad

ಕಾಲೇಜು, ವಿವಿ ಅಂತಿಮ ವರ್ಷದ ಪರೀಕ್ಷೆ: ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಆದಿತ್ಯ ಠಾಕ್ರೆ

Update: 2020-07-18 22:00 IST

ಮುಂಬೈ, ಜು. 18: ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಲ್ಲಿ ಮುಂದೂಡಲಾದ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಅಂತಿಮ ಪರೀಕ್ಷೆಯನ್ನು ಸೆಪ್ಟಂಬರ್ ನಲ್ಲಿ ನಡೆಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಮಹಾರಾಷ್ಟ್ರದ ಸಂಪುಟ ಸಚಿವ ಆದಿತ್ಯ ಠಾಕ್ರೆ ಶನಿವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಶಿವಸೇನೆಯ ಯುವ ಘಟಕ ಹಾಗೂ ಆದಿತ್ಯ ಠಾಕ್ರೆ ನೇತೃತ್ವದ ಯುವ ಸೇನೆ ಸುಪ್ರೀಂ ಕೋರ್ಟ್ ನಲ್ಲಿ ಈ ಮನವಿ ಸಲ್ಲಿಸಿದೆ. ಪರೀಕ್ಷೆ ನಡೆಸಲು ಅವಕಾಶ ನೀಡುವ ಮೂಲಕ ಕೇಂದ್ರ ಸರಕಾರ ದೇಶದಾದ್ಯಂತದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸುರಕ್ಷೆ, ಆತಂಕವನ್ನು ನಿರ್ಲಕ್ಷಿಸಿದೆ ಎಂದು ಯುವ ಸೇನೆ ತನ್ನ ದೂರಿನಲ್ಲಿ ತಿಳಿಸಿದೆ. ಕೊರೋನಾ ರಾಷ್ಟ್ರೀಯ ಪಿಡುಗು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಅಂತಿಮ ಪರೀಕ್ಷೆಯನ್ನು ರದ್ದುಗೊಳಿಸಬೇಕಿತ್ತು. ದೇಶ ಎದುರಿಸುತ್ತಿರುವ ಗೊಂದಲ ಯುಜಿಸಿಗೆ ಅರ್ಥವಾಗುತ್ತಿಲ್ಲ ಎಂದು ಕಾಣುತ್ತಿದೆ ಎಂದು ಯುವ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಪರಿವೀಕ್ಷಕರು ಬರುವುದು ಹಾಗೂ ಅಲ್ಲಿ ಹಿಂದಿರುಗಿ ಹೋಗುವುದರಿಂದ ರೋಗ ಹರಡುವ ಸಾಧ್ಯತೆಯನ್ನು ಗುರುತಿಸಿರುವ ಯುವ ಸೇನೆ, ಐಐಟಿಗಳಂತಹ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು ಅಂತಿಮ ಪರೀಕ್ಷೆಯನ್ನು ರದ್ದುಪಡಿಸಿರುವುದನ್ನು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News