ಭಾರತದಲ್ಲಿ ಕೊರೋನ ಸಾಮುದಾಯಿಕ ಹರಡುವಿಕೆ ಆರಂಭವಾಗಿದೆ: ಐಎಂಎ ಮುಖ್ಯಸ್ಥರ ಎಚ್ಚರಿಕೆ
ಹೊಸದಿಲ್ಲಿ: ಭಾರತದಲ್ಲಿ 34,000 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಕೊರೋನ ಸೋಂಕಿತರ ಸಂಖ್ಯೆ 10.38 ಲಕ್ಷಕ್ಕೆ ತಲುಪಿದೆ. ಈ ನಡುವೆ ಹೇಳಿಕೆ ನೀಡಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ದೇಶದಲ್ಲಿ ಸಾಮುದಾಯಿಕವಾಗಿ ಸೋಂಕು ಹರಡಲು ಆರಂಭವಾಗಿದೆ ಎಂದಿದೆ ಎಂದು timesofindia ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಐಎಂಎ ಹಾಸ್ಪಿಟಲ್ ಬೋರ್ಡ್ ಆಫ್ ಇಂಡಿಯಾದ ಮುಖ್ಯಸ್ಥ ಡಾ. ವಿಕೆ. ಮೋಂಗಾ, “ಪ್ರತಿದಿನ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತ ಹೆಚ್ಚುತ್ತಿದೆ. ಇದಕ್ಕೆ ಸಂಬಂಧಿಸಿ ಹಲವು ಕಾರಣಗಳಿವೆ ಆದರೆ ಇದು ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿದೆ. ಇದು ಕೆಟ್ಟ ಸಂಕೇತ. ಕೊರೋನ ಸಾಮುದಾಯಿಕವಾಗಿ ಹರಡುತ್ತಿರುವುದನ್ನು ಇದು ತೋರಿಸುತ್ತಿದೆ” ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಸಾಮುದಾಯಿಕವಾಗಿ ಕೊರೋನ ಹರಡುತ್ತಿದೆ ಎನ್ನುವುದನ್ನು ನಿರಾಕರಿಸುತ್ತಿರುವ ನಡುವೆಯೇ ಈ ಹೇಳಿಕೆ ಮಹತ್ವದ್ದಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 10,38,716. ಸಕ್ರಿಯ ಪ್ರಕರಣಗಳ ಸಂಖ್ಯೆ 3,58,629 ಮತ್ತು 6,53,751 ಮಂದಿ ಗುಣಮುಖ/ಬಿಡುಗಡೆಗೊಂಡಿದ್ದಾರೆ. ಈವರೆಗೆ 26,273 ಮಂದಿ ಮೃತಪಟ್ಟಿದ್ದಾರೆ.