ಲಾ: ಮೊದಲ ಸಲದ ಗೊಂದಲ..!

Update: 2020-07-19 06:03 GMT

ಅದು ರಾತ್ರಿಯ ಸಮಯ. ಪ್ರೇಮಿಗಳಿಬ್ಬರು ಕಾರಿನಲ್ಲಿ ನಿಧಾನಕ್ಕೆ ಸಂಚರಿಸುತ್ತಿರುತ್ತಾರೆ. ಕತ್ತಲಿನ ರಸ್ತೆಯಿಂದ ದಿಢೀರನೆ ಓಡಿಕೊಂಡು ಬಂದ ಯುವತಿಯೊಬ್ಬಳು ಡ್ರಾಪ್ ಕೇಳುತ್ತಾಳೆ. ಆಕೆಯ ಹಿಂದೆಯೇ ಅಟ್ಟಾಡಿಸಿ ಬರುತ್ತಿರುವವರನ್ನು ಕಂಡೊಡನೆ ಕಾರಿನಲ್ಲಿದ್ದ ಪ್ರೇಮಿಗಳು ಆಕೆಗೆ ಡ್ರಾಪ್ ನೀಡುತ್ತಾರೆ. ಅವರೊಂದಿಗೆ ಪೊಲೀಸ್ ಸ್ಟೇಷನ್‌ಗೆ ತೆರಳಿ ದೂರು ನೀಡುತ್ತಾಳೆ. ಆಕೆಯ ಪ್ರಕಾರ ಅದಾಗಲೇ ಆಕೆಯ ಮೇಲೆ ಅತ್ಯಾಚಾರ ನಡೆದಿರುತ್ತದೆ. ಹಾಗೆ ದೂರು ನೀಡಿದ ಸಂತ್ರಸ್ತೆಯ ಹೆಸರು ನಂದಿನಿ. ಆದರೆ ಆಕೆಯ ದೂರನ್ನು ಠಾಣಾಧಿಕಾರಿ ಕೃಷ್ಣಮೂರ್ತಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಪೂರಕವಾಗಿ ತನ್ನ ಮಗಳು ಅತ್ಯಾಚಾರದ ಸಂತ್ರಸ್ತೆಯಾಗಿ ಗೋಚರಿಸುವುದನ್ನು ಬಯಸದ ನಂದಿನಿಯ ತಂದೆ ಕೂಡ ಆ ಪ್ರಕರಣ ದಾಖಲಾಗದಂತೆ ಮಾಡಲು ಪ್ರಯತ್ನಿಸುತ್ತಾನೆ! ಆದರೆ ನಂದಿನಿ ಜಿದ್ದಿಗೆ ಬಿದ್ದವಳು. ಆಕೆ ಏಕಾಂಗಿಯಾಗಿ ಹೋರಾಟ ಮುಂದುವರಿಸುತ್ತಾಳೆ. ಅದಕ್ಕೆ ತಕ್ಕಂತೆ ಆಕೆ ಕಾನೂನು ಅಭ್ಯಾಸ ಮಾಡಿಕೊಂಡಿರುವ ಕಾರಣ ತನ್ನ ಕೇಸನ್ನು ತಾನೇ ವಾದಿಸುವ ತೀರ್ಮಾನವನ್ನು ಕೂಡ ಮಾಡುತ್ತಾಳೆ. ಕತೆ ಇಷ್ಟೇ ಆಗಿದ್ದರೆ, ಆಕೆಗೆ ಈ ಪ್ರಕರಣದಲ್ಲಿ ‘ನ್ಯಾಯ ಸಿಗುವುದು ಅಥವಾ ಸಿಗದೇ ಇರುವುದು’ ಅಷ್ಟೇ ಸಿನೆಮಾ ಎನ್ನಬಹುದು. ಆದರೆ ಇಲ್ಲಿ ಕತೆಯೊಳಗೆ ಸಾಕಷ್ಟು ತಿರುವುಗಳಿವೆ. ಆ ತಿರುವುಗಳೇನು ಎನ್ನುವುದನ್ನು ಚಿತ್ರದ ಮೂಲಕವೇ ನೋಡುವುದು ಚೆನ್ನಾಗಿರುತ್ತದೆ.

ನಿಮ್ಮ ನಿರೀಕ್ಷೆಯಂತೆ ಘಟನೆಯಲ್ಲಿ ಸಂತ್ರಸ್ತೆಯಾದವಳೇ ಚಿತ್ರದ ನಾಯಕಿ. ನಂದಿನಿಯಾಗಿ ರಾಗಿಣಿ ಪ್ರಜ್ವಲ್ ನಟಿಸಿದ್ದಾರೆ. ಇದು ಅವರಿಗೆ ಪ್ರಥಮ ಚಿತ್ರ. ಪ್ರಥಮದಲ್ಲೇ ನಾಯಕಿ ಪ್ರಧಾನ ಚಿತ್ರ ಅವರಿಗೆ ದೊರಕಿದೆ. ಬಹುಶಃ ಅದೇ ಕಾರಣದಿಂದಲೇ ಇರಬಹುದು, ಪಾತ್ರದ ನಾಯಕಿಗೆ ಸಿಗಬೇಕಾದ ತೂಕ ಅವರಲ್ಲಿ ಕಾಣಿಸುವುದಿಲ್ಲ. ಅದಕ್ಕೆ ಬಹಳಷ್ಟು ದೃಶ್ಯ ಸಂಯೋಜನೆಗಳೂ ಕಾರಣ. ಯಾಕೆಂದರೆ ಪೂರ್ತಿ ಸಿನೆಮಾ ಒಂದು ಸೂಕ್ಷ್ಮ ಭಾವನೆಯ ಮೇಲೆ ಸಾಗುತ್ತಿರುತ್ತದೆ. ಆದರೆ ಆ ಸೂಕ್ಷ್ಮತೆಗೆ ತಕ್ಕಂತೆ ಪ್ರೇಕ್ಷಕರನ್ನು ತಯಾರಿ ಮಾಡುವ ಯಾವ ದೃಶ್ಯಗಳೂ ಚಿತ್ರದಲ್ಲಿಲ್ಲ. ಮಾತ್ರವಲ್ಲ, ಆ ಗಂಭೀರತೆಯಿಂದ ಹೊರಗೆ ತರುವಂತಹ ಪಾತ್ರಗಳೇ ವಿಜೃಂಭಿಸಿವೆ! ಉದಾಹರಣೆಗೆ ಅತ್ಯಾಚಾರವನ್ನು ಗಂಭೀರವಾಗಿ ಸ್ವೀಕರಿಸದ ಪೊಲೀಸ್ ಅಧಿಕಾರಿ, ಘಟನೆಯನ್ನು ಅಡಗಿಸಲೆತ್ನಿಸುವ ತಂದೆಯ ಪಾತ್ರ ಮೊದಲಾದವು. ಆದರೆ ಮುಂದೆ ಇವೆಲ್ಲವುಗಳ ಹಿಂದಿನ ಸತ್ಯವನ್ನು ತೆರೆದಿಟ್ಟಾಗ ಮೊದಲಿನ ದೃಶ್ಯಗಳಿಗೆ ಒಂದಷ್ಟು ಸಮರ್ಥನೆ ಕಂಡುಕೊಳ್ಳಬಹುದು. ಹಾಗಂತ ಪೂರ್ತಿ ಚಿತ್ರವನ್ನು ಸಮರ್ಥಿಸಲಾಗದ ರೀತಿಯಲ್ಲಿ ಮಾಡಿದ್ದಾರೆ ನಿರ್ದೇಶಕ ರಘು ಸಮರ್ಥ್.

ನಿರ್ದೇಶಕರಿಗೆ ಇದು 2ನೆ ಚಿತ್ರ. ಆ ನಿಟ್ಟಿನಲ್ಲಿ ನೋಡಿದರೆ ಅವರು ಭರವಸೆಯ ನಿರ್ದೇಶಕರೆಂದೇ ಗುರುತಿಸಲ್ಪಡುತ್ತಾರೆ. ಆದರೆ ನಾಯಕಿಯ ವಿಚಾರದಲ್ಲಿ ಹೇಳಿದಂತೆ ಪ್ರಥಮದಲ್ಲೇ ಇಷ್ಟೊಂದು ಹೆವಿ ಸಬ್ಜೆಕ್ಟ್ ಜತೆಗಿನ ಪ್ರಯೋಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ ಕಾಣಿಸುತ್ತದೆ. ಒಂದುವೇಳೆ ತಂತ್ರಜ್ಞರಾದರೂ ಶ್ರೇಷ್ಠಮಟ್ಟದಲ್ಲಿ ಕೈ ಹಿಡಿದಿದ್ದರೆ ಚಿತ್ರವನ್ನು ಮೆಚ್ಚಬಹುದಿತ್ತೇನೋ. ವಿಪರ್ಯಾಸ ಎನ್ನುವ ಹಾಗೆ ಸಂಕಲನ ಕೂಡ ಸಮಾಧಾನ ನೀಡುವುದಿಲ್ಲ. ಕೋರ್ಟ್ ದೃಶ್ಯಗಳಲ್ಲಂತೂ ಒಂದೇ ಸನ್ನಿವೇಶವನ್ನು ಎರಡು ಫ್ರೇಮ್‌ಗಳಲ್ಲಿ ತೋರಿಸುವಾಗ ನ್ಯಾಯಾಧೀಶರ ಹಿಂದಿನ ಗಡಿಯಾರದಲ್ಲಿ ಸಮಯದ ಮುಳ್ಳುಗಳು ಅವಾಸ್ತವಿಕವಾಗಿ ಹಾರಿದಂತಾಗಿದೆ! ಇಂತಹ ಸೂಕ್ಷ್ಮಗಳನ್ನು ಗಮನಿಸದೇ ಹೋಗಿರುವಲ್ಲಿ ನಿರ್ದೇಶಕರ ತಂಡವನ್ನು ದೂರಲೇಬೇಕಾಗುತ್ತದೆ.

ಹಾಸ್ಯಕ್ಕೆಂದು ಪ್ರತ್ಯೇಕ ಟ್ರ್ಯಾಕ್ ಬಳಸಿರದ ಕಾರಣ, ಪ್ರಮುಖ ಪಾತ್ರಗಳ ಮೂಲಕವೇ ಹಾಸ್ಯ ಹೊರ ತರುವ ಪ್ರಯತ್ನ ಮಾಡಿರುವುದು ಒಪ್ಪುವಂತಹ ವಿಚಾರ. ಆದರೆ ಅದೇ ಸಂದರ್ಭದಲ್ಲೇ ಮುಖ್ಯ ವಿಚಾರಕ್ಕೆ ಸಲ್ಲಬೇಕಾದ ಎಮೋಶನ್ಸ್ ಪ್ರೇಕ್ಷಕರನ್ನು ತಲುಪದಂತಾಗಿದೆ. ಪೊಲೀಸ್ ಅಧಿಕಾರಿಯಾಗಿ ಮಂಡ್ಯ ರಮೇಶ್ ವಿಭಿನ್ನ ಇಮೇಜ್‌ನಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ರೈಂ ಬ್ರಾಂಚ್‌ನಿಂದ ಬರುವ ತನಿಖಾಧಿಕಾರಿ ಪಾರ್ಥಸಾರಥಿ ಬ್ರಹ್ಮನಾಗಿ ಕೃಷ್ಣ ಹೆಬ್ಬಾಳೆ ಗಂಭೀರತೆ ಮೂಡಿಸಿದ್ದಾರೆ. ಅವರಿಗೆ ನಾಯಕನ ಮಾದರಿಯ ಬಿಲ್ಡಪ್ ನೀಡಿದ್ದು, ಅದಕ್ಕೆ ತಕ್ಕಂತೆ ತೆಲುಗು ಸ್ಟಾರ್ ಜಗಪತಿ ಬಾಬು ಅವರನ್ನು ನೆನಪಿಸುವಂತಹ ನಟನೆಯನ್ನೂ ನೀಡಿದ್ದಾರೆ. ನಂದಿನಿಯ ತಂದೆಯಾಗಿ ಅವಿನಾಶ್ ಮತ್ತು ಆಕೆಯ ಗೆಳತಿಯ ತಂದೆಯಾಗಿ ಅಚ್ಯುತ್ ಕುಮಾರ್ ತಮ್ಮ ಎಂದಿನ ನಟನೆಯಿಂದ ಆಕರ್ಷಿಸುತ್ತಾರೆ.

ಗೆಳತಿ ದಶಮಿ ಪ್ರಕಾಶ್ ಪಾತ್ರದಲ್ಲಿ ನಟಿ ಸಿರಿ ಪ್ರಹ್ಲಾದ್ ಇದ್ದಾರೆ. ಅತ್ಯಾಚಾರ ಆರೋಪಿಗಳಲ್ಲೊಬ್ಬರ ತಂದೆ ತಾಯಿಯಾಗಿ ನಾಗರಾಜ ಮೂರ್ತಿ ಮತ್ತು ಸುನೇತ್ರಾ ಪಂಡಿತ್ ಅಭಿನಯಿಸಿದ್ದಾರೆ. ಆರೋಪಿಗಳ ಪರ ವಕೀಲ ಶ್ಯಾಮ್ ಪ್ರಸಾದ್ ಪಾತ್ರದಲ್ಲಿ ನಟರಂಗ ರಾಜೇಶ್ ಅಭಿನಯಿಸಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ತಾವು ನಟಿಸಬೇಕಾದ ಪೋಷಕ ಪಾತ್ರಕ್ಕೆ ಮತ್ತೊಬ್ಬರಿಲ್ಲ ಎನ್ನುವ ಮಟ್ಟದಲ್ಲಿ ಅವರು ನಟಿಸಿದ್ದಾರೆ. ವಿಮಲಾ ಪಾಠಕ್ ಪಾತ್ರದಲ್ಲಿ ಸುಧಾರಾಣಿ ಅತಿಥಿ ತಾರೆಯಾಗಿದ್ದಾರೆ. ಕಾಯ್ಕಿಣಿಯವರ ಸಾಹಿತ್ಯ ಮತ್ತು ವಾಸುಕಿ ವೈಭವ್ ಸಂಗೀತದ ಮೋಡಿಯನ್ನೂ ಆಸ್ವಾದಿಸುವ ಸಂದರ್ಭವನ್ನು ಚಿತ್ರ ಸೃಷ್ಟಿಸುವುದಿಲ್ಲ. ಕತೆಯಲ್ಲಿ ಅತ್ಯಾಚಾರದಂತಹ ಮನಕಲಕುವ ಅಂಶ ಮತ್ತು ಸಸ್ಪೆನ್ಸ್ ಇದ್ದರೂ ಅವೆರಡನ್ನು ಸರಿಯಾಗಿ ಹೊಂದಿಸಿಕೊಳ್ಳುವಲ್ಲಿ ನಿರ್ದೇಶಕರು ಎಡವಿದ್ದಾರೆ ಎನ್ನಬಹುದು. ಅದರ ಹೊರತಾಗಿ, ಕತೆಯೊಳಗಿನ ತಿರುವುಗಳು ಒಂದು ವಿಭಿನ್ನ ಪ್ರಯತ್ನವಾಗಿ ಗುರುತಿಸಲ್ಪಡುತ್ತದೆ. ನೇರವಾಗಿ ಒಟಿಟಿ ವಿಭಾಗದಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಚಿತ್ರ ಎನ್ನುವ ಕಾರಣದಿಂದ ಸಿನೆಮಾ ಇತಿಹಾಸದಲ್ಲಿಯೂ ‘ಲಾ’ ಚಿರಸ್ಥಾಯಿಯಾಗಲಿದೆ.

ತಾರಾಗಣ: ರಾಗಿಣಿ ಪ್ರಜ್ವಲ್, ಅಚ್ಯುತ್ ಕುಮಾರ್
ನಿರ್ದೇಶನ: ರಘು ಸಮರ್ಥ
ನಿರ್ಮಾಣ: ಪಿ.ಆರ್.ಕೆ. ಪ್ರೊಡಕ್ಷನ್ಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News