ದಿಲ್ಲಿಯಲ್ಲಿ ಭಾರೀ ಮಳೆ: ಓರ್ವ ಸಾವು
ಹೊಸದಿಲ್ಲಿ, ಜು.19: ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ಭಾರೀ ಮಳೆಯಿಂದಾಗಿ ಪ್ರಮುಖ ರಸ್ತೆಯಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಯಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ರಾಜಧಾನಿಯ ಪ್ರತಿಷ್ಟಿತ ಮಿಂಟೊ ಸೇತುವೆಯ ಬಳಿ ಭಾರೀ ಪ್ರವಾಹ ಕಂಡುಬಂದಿದ್ದು, ಓರ್ವ ವ್ಯಕ್ತಿಯ ಮೃತದೇಹ ಸೇತುವೆಯ ಅಡಿಯಲ್ಲಿ ಪ್ರವಾಹದ ನೀರಿನಲ್ಲಿ ತೇಲುತ್ತಿರುವಂತೆ ಕಂಡು ಬಂದಿದೆ. ಪಿಕ್ ಅಪ್ ಟ್ರಕ್ ಚಾಲಕನ ಮೃತದೇಹವನ್ನು ಹೊಸದಿಲ್ಲಿಯಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಟ್ರಾಕ್ ಮ್ಯಾನ್ ಪತ್ತೆ ಮಾಡಿದ್ದಾರೆ.
ನಾನು ಹಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಮೃತದೇಹವನ್ನು ಗುರುತಿಸಿದೆ. ನಾನು ಹಳಿಯಿಂದ ಕೆಳಗೆಬಂದು ಈಜಿಕೊಂಡು ಹೋಗಿ ಮೃತದೇಹವನ್ನು ಪಡೆದುಕೊಂಡೆ.ಮೃತದೇಹವು ಬಸ್‌ನಮುಂಭಾಗ ತೇಲುತ್ತಿತ್ತು ಎಂದು ರಾಮನಿವಾಸ್ ಮೀನಾ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.
ದಿಲ್ಲಿಯಲ್ಲಿ ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ತಾಪಮಾನದಲ್ಲಿ ಇಳಿಕೆಯಾಗಿದೆ. ಹಲವು ಜನರು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ವೀಡಿಯೊ ಹಾಗೂ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.