ವಾರಣಾಸಿಯ ವ್ಯಕ್ತಿಗೆ 1,000 ರೂ. ನೀಡಿ ತಲೆ ಬೋಳಿಸಿ, ನೇಪಾಳಿಯಂತೆ ನಟಿಸಲು ಹೇಳಿದ್ದ ವಿಶ್ವಹಿಂದೂ ಸೇನಾ
ವಾರಣಾಸಿ: ನೇಪಾಳಿ ಎನ್ನಲಾದ ವ್ಯಕ್ತಿಯ ತಲೆ ಬೋಳಿಸಿ ಹಲ್ಲೆ ನಡೆಸಿದ ಪ್ರಕರಣದ ಹಿಂದಿನ ರಹಸ್ಯವನ್ನು ಇದೀಗ ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಗೆ ಕಾರಣವಾದ ಈ ಪ್ರಕರಣದಲ್ಲಿ ಕೇಸರಿ ಸಂಘಟನೆಯೊಂದು, ವಾರಣಾಸಿಯ ಸ್ಥಳೀಯ ವ್ಯಕ್ತಿಗೆ 1000 ರೂಪಾಯಿ ನೀಡಿ ತಾವು ಹೇಳಿದ ರೀತಿಯಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಶುಕ್ರವಾರ ವೈರಲ್ ಆದ ವಿಡಿಯೊವೊಂದರಲ್ಲಿ ಕಂಡುಬಂದಂತೆ, ಆರಂಭದಲ್ಲಿ ನೇಪಾಳಿ ಎನ್ನಲಾದ ವ್ಯಕ್ತಿಯೊಬ್ಬನ ವೇಳೆ ಗುಂಪು ಹಲ್ಲೆ ನಡೆಸಿ “ಜೈಶ್ರೀರಾಂ”ಘೋಷಣೆ ಕೂಗುವಂತೆ ಬಲವಂತಪಡಿಸಿತ್ತು. ವಿಡಿಯೊದಲ್ಲಿ ಕಂಡುಬರುವಂತೆ ಅರೆಬೆತ್ತಲಾದ ವ್ಯಕ್ತಿಯೊಬ್ಬ ಘಾಟ್ ನಲ್ಲಿ ಕೈ ಮುಗಿದು ಕುಳಿತಿದ್ದ. ಆತನತಲೆ ಬೋಳಿಸಿ ಕಪ್ಪು ಮಾರ್ಕರ್ ನಲ್ಲಿ ಜೈ ಶ್ರೀರಾಮ್ ಎಂದು ಬರೆಯಲಾಗಿತ್ತು. ಕೆಲವರು ಜೈ ಶ್ರೀರಾಂ ಘೋಷಣೆ ಕೂಗುವಂತೆಯೂ ಒತ್ತಾಯಿಸುತ್ತಿದ್ದರು.
ಆದರೆ ವಾಸ್ತವವಾಗಿ ಈತ ನೇಪಾಳದ ಪ್ರಜೆಯಲ್ಲ. ಮೂಲತಃ ವಾರಣಾಸಿಯವ ಎನ್ನುವುದು ಪೊಲೀಸರು ಆತನ ಆಧಾರ್ ಹಾಗೂ ಐಡಿ ಕಾರ್ಡ್ ನೋಡಿದಾಗ ತಿಳಿದುಬಂದಿದೆ. ನೇಪಾಳಿಯಂತೆ ನಟಿಸಲು ವಿಶ್ವ ಹಿಂದೂ ಸೇನಾ ಎಂಬ ಸಂಘಟನೆ 1000 ರೂಪಾಯಿ ನೀಡಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಸಂಘಟನೆಯ ಸಂಚಾಲಕ ಅರುಣ್ ಪಾಠಕ್ ಈ ವಿಡಿಯೊವನ್ನು ಫೇಸ್ ಬುಕ್ ಪೇಜ್ ನಲ್ಲಿ ಜುಲೈ 16ರಂದು ಸಂಜೆ ಪೋಸ್ಟ್ ಮಾಡಿದ್ದ. ಈ ವ್ಯಕ್ತಿಯನ್ನು ವಾರಣಾಸಿಯ ಭೇಲುಪುರಠಾಣೆ ವ್ಯಾಪ್ತಿಯ ಗಂಗಾನದಿ ದಂಡೆಗೆ ಕರೆದೊಯ್ಯಲಾಗಿತ್ತು. ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಓಲಿಯವರ ವಿರುದ್ಧ ಪ್ರತಿಭಟನಾರ್ಥವಾಗಿ ಹೀಗೆ ಮಾಡಲಾಗಿದೆ ಎಂದು ತನ್ನ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದ.