×
Ad

ಮಹಿಳೆಯ ಶಸ್ತ್ರ ಚಿಕಿತ್ಸೆಗೆ ಜನರಿಂದ 1.2 ಕೋಟಿ ರೂ. ಸಂಗ್ರಹ : ಮೊದಲು ದಾಖಲೆ, ಮತ್ತೆ ಭಾರೀ ವಿವಾದ

Update: 2020-07-19 16:16 IST

ಕೊಚ್ಚಿ: ಅನಾರೋಗ್ಯದಿಂದಿದ್ದ ತನ್ನ ತಾಯಿಯ ಪಿತ್ತಜನಕಾಂಗದ ಕಸಿಗಾಗಿ ಕೇರಳದ ಕಣ್ಣೂರಿನ 22 ವರ್ಷದ ವರ್ಷಾ ತನಗೆ ಧನಸಹಾಯ ನೀಡುವಂತೆ ಮನವಿ ಮಾಡಿದ್ದರು. ವರ್ಷಾ ಅವರ ತಾಯಿ ರಾಧಾರನ್ನು ಅಮೃತಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸೆಗಾಗಿ 20 ಲಕ್ಷ ರೂ. ಬೇಕಾಗಿತ್ತು. ಯುವತಿಯ ಈ ಮನವಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 24  ಗಂಟೆಗಳಲ್ಲಿ 60 ಲಕ್ಷ ರೂ. ಸಂಗ್ರಹವಾಯಿತು. ಮರುದಿನ ಈ ಮೊತ್ತ ಕೋಟಿಯನ್ನು ದಾಟಿತು. ಕೊನೆಗೆ ಆಕೆಗೆ ಬಂದ ಒಟ್ಟು ಮೊತ್ತ 1 ಕೋಟಿ 21 ಲಕ್ಷ ರೂ. ಈ ವಿಚಾರ ಮಾಧ್ಯಮಗಳಲ್ಲೂ ವರದಿಯಾಯಿತು.

ಆದರೆ ಇದೇ ಸಂದರ್ಭ ಕೇರಳದಲ್ಲಿ ಈ ಮೊತ್ತಕ್ಕೆ ಸಂಬಂಧಿಸಿ ಭಾರೀ ವಿವಾದವೂ ಹುಟ್ಟಿಕೊಂಡಿತು. ದೌರ್ಜನ್ಯ , ವಂಚನೆ ಮತ್ತು ಹವಾಲಾ ಹಣದ ಆರೋಪಗಳು ಕೇಳಿ ಬಂತು. ಸಾಜನ್ ಕೇಚೇರಿ ಮತ್ತು ಫಿರೋಝ್ ಕುನ್ನಂಪರಂಬಿಲ್ ನೆರವಿನಿಂದ ವರ್ಷಾ ಈ ಮೊತ್ತವನ್ನು ಸಂಗ್ರಹಿಸಿದ್ದರು. ವಿಡಿಯೋ ಅಭಿಯಾನದ ಮೂಲಕ ವರ್ಷಾಗೆ ನೆರವಾಗಲು ಮುಂದೆ ಬಂದವರು ಸಾಜನ್ ಆಗಿದ್ದರೆ, ಈ ವಿಡಿಯೋವನ್ನು ಶೇರ್ ಮಾಡಿ ಭಾರೀ ಮೊತ್ತ ಸಂಗ್ರಹಕ್ಕೆ ಫಿರೋಝ್ ಕಾರಣರಾದರು.

ಈ ಇಬ್ಬರೂ ಸಾಮಾಜಿಕ ಕಾರ್ಯಕರ್ತರು ಹಲವಾರು ಜನರಿಗೆ ಸಹಾಯ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. ಹಣ ಸಂಗ್ರಹಿಸಿದ ಫಲಾನುಭವಿಗಳಿಗೆ ನೀಡಿ, ನಂತರ ಉಳಿದ ಹಣವನ್ನು ಸಂಕಷ್ಟದಲ್ಲಿರುವ ಇತರರಿಗೆ ಹಂಚುತ್ತೇವೆ ಎಂದು ಈ ಇಬ್ಬರು ಹೇಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ವರ್ಷಾ ಹೆಚ್ಚುವರಿ ಹಣವನ್ನು ಇತರ ರೋಗಿಗಳಿಗೆ ಸಹಾಯ ಮಾಡಲು ನೀಡುತ್ತಿಲ್ಲ ಎಂದು ಆರೋಪಿಸಿತು. ಈ ಬಗ್ಗೆ ವಿಡಿಯೋ ಮಾಡಿದ ಸಾಜನ್ , ವರ್ಷಾ ಹೆಚ್ಚವರಿ ಹಣವನ್ನು ಮರಳಿ ನೀಡುತ್ತಿಲ್ಲ. ಈ ಮೂಲಕ ಸಹಾಯ ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

“ತುರ್ತಾಗಿ ಪಿತ್ತಜನಕಾಂಗದ ಕಸಿ ಅಗತ್ಯವಾಗಿರುವ ಮತ್ತೊಬ್ಬ ರೋಗಿಯಿದ್ದಾರೆ. ವರ್ಷಾ ಸಹಾಯ ಕೇಳಿದಾಗ ನಾವು ಆ ರೋಗಿಗಾಗಿ ಹಣ ಸಂಗ್ರಹಕ್ಕೆ ಮುಂದಾಗಿದ್ದೆವು. ಅಭಿಯಾನಕ್ಕೆ ಮೊದಲು ವರ್ಷಾ ಜೊತೆ ಒಪ್ಪಂದ ಮಾಡಿಕೊಂಡೆವು. ಅದರ ಪ್ರಕಾರ ಹೆಚ್ಚುವರಿ ಹಣವನ್ನು ವರ್ಷಾ ನಮಗೆ ನೀಡಬೇಕಾಗಿತ್ತು. ಅದರ ಇತರ ರೋಗಿಗಳಿಗೆ ಸಹಾಯ ಮಾಡಲು ನೀಡಬೇಕಾಗಿತ್ತು” ಎಂದವರು ಹೇಳಿದರು.

ಇದರ ನಂತರ ವರ್ಷಾ ವಿಡಿಯೋವೊಂದನ್ನು ಮಾಡಿ ಗುಂಪೊಂದು ನನಗೆ ಆಗಾಗ ಕರೆ ಮಾಡುತ್ತಾ ಉಪಟಳ ನೀಡುತ್ತಿದೆ ಎಂದರು.

“ಇತರ ರೋಗಿಗಳಿಗೆ ಹಣ ನೀಡುವುದಿಲ್ಲ ಎಂದು ನಾನು ಹೇಳಿಲ್ಲ. ನನ್ನ ತಾಯಿ ಮತ್ತು ನಾನು ಇನ್ನಷ್ಟೇ ಚೇತರಿಸಿಕೊಳ್ಳುತ್ತಿದ್ದು, 3 ತಿಂಗಳು ಕಾಯುವಂತೆ ಮಾತ್ರ ಹೇಳಿದ್ದೆ (ವರ್ಷಾ ತಾಯಿಗೆ ತಮ್ಮ ಪಿತ್ತಜನಕಾಂಗದ ಭಾಗವೊಂದನ್ನು ದಾನ ನೀಡಿದ್ದಾರೆ). ನನ್ನ ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಾಣಿಸಿಕೊಂಡರೆ ನನಗೆ ಇನ್ನಷ್ಟು ಹಣ ಬೇಕಾಗಬಹುದು” ಎಂದು ವರ್ಷಾ ಹೇಳಿದ್ದಾರೆ. ಅಭಿಯಾನದ ಮೂಲಕ ಸಂಗ್ರಹವಾದ ಹಣದಿಂದ ತಾನು ಅಮೃತಾ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ತಾನು ನೆರವಾಗಿದ್ದೇನೆ ಎಂದೂ ಅವರು ಹೇಳಿದರು.

ಇದೀಗ ಈ ಪ್ರಕರಣ ಭಾರೀ ವಿವಾದ ಸೃಷ್ಟಿಸಿದ್ದು, ಕೆಲ ಗುಂಪುಗಳು ವರ್ಷಾಗೆ ಬೆಂಬಲ ನೀಡುತ್ತಿದ್ದರೆ ಮತ್ತೆ ಕೆಲವರು ಆಕೆಯನ್ನು ದುರಾಸೆ ತುಂಬಿದವಳು ಎಂದು ಆರೋಪಿಸುತ್ತಿದ್ದಾರೆ.

ಶುಕ್ರವಾರ ವರ್ಷಾ ದೂರಿನ ಆಧಾರದಲ್ಲಿ ಸಾಜನ್ ಮತ್ತು ಫಿರೋಝ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಸಂಗ್ರಹವಾದ ನಿಧಿಯ ಬಗ್ಗೆ ಶಂಕೆಗಳು ವ್ಯಕ್ತವಾದ ಬಳಿಕ ಈ ಬಗ್ಗೆ ತನಿಖೆ ನಡೆಸಲು ಕೊಚ್ಚಿ ಡಿಸಿಪಿ ಜಿ. ಪೂಂಗುಳಲಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News