ಮೂರು ದೇವಸ್ಥಾನಗಳ ಎದುರು ಟಯರ್ ಸುಟ್ಟು, ಉದ್ವಿಗ್ನತೆ ಸೃಷ್ಟಿಸಿದನ ಮಾಹಿತಿ ಪತ್ತೆ
Update: 2020-07-19 20:55 IST
ಚೆನ್ನೈ, ಜು.19: ಕೊಯಂಬತ್ತೂರಿನ ಮೂರು ದೇವಸ್ಥಾನಗಳ ಎದುರು ಟಯರ್ ಗಳನ್ನು ಸುಟ್ಟು ಹಾಕಿ ಪರಿಸರದಲ್ಲಿ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಗಿದ್ದ ವ್ಯಕ್ತಿಯ ಮಾಹಿತಿಯನ್ನು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಯಂಬತ್ತೂರಿನ ಮಹಾಕಾಳಿಯಮ್ಮನ್ ದೇವಸ್ಥಾನ, ವಿನಾಯಗರ್ ದೇವಸ್ಥಾನ ಹಾಗೂ ಸೆಲ್ವ ವಿನಾಯಗರ್ ದೇವಸ್ಥಾನದ ಮುಂಭಾಗ ಟಯರ್ ಗಳನ್ನು ಸುಟ್ಟಿರುವುದು ಶನಿವಾರ ಬೆಳಕಿಗೆ ಬಂದ ಬಳಿಕ ಬಿಜೆಪಿ, ಹಿಂದೂ ಮುನ್ನಣಿ, ವಿಎಚ್ ಪಿ ಹಾಗೂ ಇತರ ಸಂಘಪರಿವಾರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ದೇವಸ್ಥಾನದ ಪರಿಸರದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಈತ ಸೇಲಂ ನಿವಾಸಿ ಗಜೇಂದ್ರನ್ ಎಂಬ ಮಾಹಿತಿ ಲಭ್ಯವಾಗಿದೆ.
ಗಜೇಂದ್ರನ್ ಶುಕ್ರವಾರ ರಾತ್ರಿ ಮನೆಯಲ್ಲಿ ಜಗಳವಾಡಿ ಮನೆಬಿಟ್ಟು ತೆರಳಿದ್ದವ ಮನೆಗೆ ಮರಳಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ. ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.