×
Ad

ರಾಜಸ್ಥಾನ ಸರಕಾರ ಉರುಳಿಸುವ ಸಂಚು ಆರೋಪ: ವಿಚಾರಣೆಗೆ ಹಾಜರಾಗಲು ಕೇಂದ್ರ ಸಚಿವ ಶೆಖಾವತ್‌ಗೆ ನೋಟಿಸ್

Update: 2020-07-20 13:18 IST

ಜೈಪುರ, ಜು.20: ರಾಜಸ್ಥಾನ ಸರಕಾರವನ್ನು ಉರುಳಿಸುವ ಸಂಚು ರೂಪಿಸಿರುವ ಆರೋಪಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ಗೆ ನೋಟಿಸ್ ನೀಡಲಾಗಿದೆ.

ಬಿಜೆಪಿಯ ಹಿರಿಯ ನಾಯಕ ಶೆಖಾವತ್ ತನ್ನ ವಿರುದ್ಧ ಕೇಳಿಬಂದಿರುವ ಆರೋಪವನ್ನು ನಿರಾಕರಿಸಿದ್ದಾರೆ.

ಸಚಿನ್ ಪೈಲಟ್ ನೇತೃತ್ವದ ಬಣ ಬಿಜೆಪಿಯ ಜೊತೆಗೆ ಸೇರಿಕೊಂಡು ಅಶೋಕ್ ಗೆಹ್ಲೋಟ್ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದೆ ಎಂದು ಕಳೆದ ವಾರ ಕಾಂಗ್ರೆಸ್ ಆರೋಪಿಸಿತ್ತು. ಕಾಂಗ್ರೆಸ್ ಆರೋಪಿಸಿದ ಬೆನ್ನಿಗೆ ಎರಡು ಎಫ್‌ಐಆರ್ ದಾಖಲಾಗಿದ್ದು, ಒಂದು ಎಫ್‌ಐಆರ್‌ನಲ್ಲಿ ಗಜೇಂದ್ರ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು.

ಕಾಂಗ್ರೆಸ್ ಪಕ್ಷವು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಆಡಿಯೊ ಪ್ರತಿಗಳನ್ನು ಬಿಡುಗಡೆ ಮಾಡಿತ್ತು. ಆಡಿಯೊದಲ್ಲಿರುವ ಧ್ವನಿ ಕೇಂದ್ರ ಸಚಿವ ಶೆಖಾವತ್ ಹಾಗೂ ಬಂಡಾಯ ಕಾಂಗ್ರೆಸ್ ಶಾಸಕ ಭನ್ವರ್‌ಲಾಲ್ ಶರ್ಮಾ ಅವರಿಗೆ ಸೇರಿದ್ದು. ಇಬ್ಬರು ಶಾಸಕರನ್ನು ಹಣ ನೀಡಿ ಖರೀದಿಸುವ ಕುರಿತು ಮಾತುಕತೆ ನಡೆಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು.

"ನಾನು ಯಾವುದೇ ತನಿಖೆ ಎದುರಿಸಲು ಸಿದ್ದ. ಆಡಿಯೊದಲ್ಲಿರುವುದು ನನ್ನ ಧ್ವನಿಯಲ್ಲ.ನನ್ನನ್ನು ವಿಚಾರಣೆಗೆ ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ''ಎಂದು ಕೇಂದ್ರ ಜಲಶಕ್ತಿ ಸಚಿವರಾಗಿರುವ ಶೆಖಾವತ್ ಹೇಳಿದ್ದಾರೆ.

ಉದ್ಯಮಿ ಸಂಜಯ್ ಜೈನ್ ವಿರುದ್ಧ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಜೈನ್‌ರನ್ನು ಶುಕ್ರವಾರ ಬಂಧಿಸಲಾಗಿದೆ. ಜೈನ್‌ರೊಂದಿಗೆ ತನಗೆ ಯಾವುದೆ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News