ದುಬೆ ಎನ್‌ಕೌಂಟರ್ ತನಿಖಾ ಸಮಿತಿಗೆ ನ್ಯಾಯಾಧೀಶರ ನೇಮಕ ಅಸಾಧ್ಯ ಎಂದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಜು.20: ಪಾತಕಿ ವಿಕಾಸ್ ದುಬೆ ಎನ್‌ಕೌಂಟರ್ ತನಿಖಾ ಸಮಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರನ್ನು ಸೇರ್ಪಡೆಗೊಳಿಸಬೇಕೆಂಬ ಆಗ್ರಹವನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಅಥವಾ ನಿವೃತ್ತ ಪೊಲೀಸ್ ಅಧಿಕಾರಿಯ ಸೇವೆಯನ್ನು ಇದಕ್ಕೆ ಬಳಸಬೇಕೆಂದು ಉತ್ತರಪ್ರದೇಶ ರಾಜ್ಯಕ್ಕೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ.
ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರನ್ನು ವಿಚಾರಣಾ ಸಮಿತಿಯ ಭಾಗವಾಗಿಸಲು ಸಾಧ್ಯವಿಲ್ಲ. ಕೋವಿಡ್ ಪರಿಸ್ಥಿತಿಯಿಂದಾಗಿ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರಿಗೆ ಅಲಹಾಬಾದ್‌ಗೆ ತೆರಳಲು ಇಷ್ಟವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಉತ್ತರಪ್ರದೇಶ ಪೊಲೀಸರ ಪರ ಹಾಜರಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಸಮಿತಿಗೆ ಸೇರ್ಪಡೆಯಾಗುವ ವ್ಯಕ್ತಿಗಳ ಅಧಿಸೂಚನೆ ತರಲು ಒಪ್ಪಿಕೊಂಡರು.ನ್ಯಾಯಾಲಯ ಬುಧವಾರ ಇದನ್ನು ಪರಿಗಣಿಸಿ ಅನುಮೋದಿಸಲಿದೆ.
ಕಾನೂನಿನ ನಿಯಮವನ್ನು ಎತ್ತಿಹಿಡಿಯುವುದು ರಾಜ್ಯದ ಕರ್ತವ್ಯ ಎಂದು ನ್ಯಾಯಾಲಯ ರಾಜ್ಯಕ್ಕೆ ನೆನಪಿಸಿದರು.