×
Ad

ಕೊರೋನ ಯೋಧ ಡಾ. ಅಝೀಝುದ್ದೀನ್ ಶೇಖ್ ಸೋಂಕಿಗೆ ಬಲಿ

Update: 2020-07-20 17:29 IST
ಡಾ. ಅಝೀಝುದ್ದೀನ್ ಶೇಖ್ (Photo: twocircles.net)

ಲಕ್ನೋ, ಜು. 20 : ಕೊರೋನ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ರಾಜಸ್ತಾನ ಮೂಲದ ಯುವ ಹಾಗು ಜನಾನುರಾಗಿ ವೈದ್ಯರೊಬ್ಬರು ಅದೇ ಸೋಂಕಿಗೆ ಬಲಿಯಾಗಿದ್ದಾರೆ. ತನ್ನ ಕರ್ತವ್ಯಕ್ಕೆ ಬದ್ಧರಾಗಿದ್ದ, ಜನರಿಗಾಗಿ ಅಪಾಯ ಲೆಕ್ಕಿಸದೆ ಸೇವೆ ಸಲ್ಲಿಸಿದ ಡಾ. ಅಝೀಝುದ್ದೀನ್ ಶೇಖ್ ಅಗಲಿದ್ದು ಅವರ ಕುಟುಂಬಕ್ಕೀಗ ದಿಕ್ಕಿಲ್ಲದಂತಾಗಿದೆ. ಅವರಿಗೆ 40 ವರ್ಷ ವಯಸ್ಸಾಗಿತ್ತು. 

ವೈದ್ಯಕೀಯ ಕಲಿಕೆಯುದ್ದಕ್ಕೂ ಟಾಪರ್ ಆಗಿದ್ದ ಡಾ. ಅಝೀಜ್ ಮೊದಲು ಗಲ್ಫ್ ದೇಶಗಳಲ್ಲಿ ಉದ್ಯೋಗದಲ್ಲಿದ್ದು ಬಳಿಕ ಬಂದು ಲಕ್ನೋದ ಅವಂತಿ ಬಾಯಿ ಆಸ್ಪತ್ರೆ ಹಾಗು ಡಫೀನ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. 

ಪ್ರತಿದಿನ 16 ರಿಂದ 17 ಗಂಟೆ ರೋಗಿಗಳ ಆರೈಕೆಯಲ್ಲಿ ಕಳೆಯುತ್ತಿದ್ದ ಡಾ. ಅಝೀಜ್ ಈಗ ಪತ್ನಿ ಹಾಗು ಮೂವರು ಸಣ್ಣ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಅವರು ಕುಟುಂಬದಲ್ಲಿ ಸಂಪಾದಿಸುವ ಏಕೈಕ ವ್ಯಕ್ತಿಯಾಗಿದ್ದರು. 

ಕೊರೋನ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಅವರು ಸ್ವಯಂ ಐಸೋಲೇಷನ್ ಗೆ ಒಳಗಾಗಿದ್ದರು. ಬಹಳ ಬೇಗ ಗುಣಮುಖನಾಗಿ ಬರುತ್ತೇನೆ ಎಂದು ಮನೆಯವರಿಗೆ ಹೇಳಿದ್ದರು. ಆದರೆ ವಿಧಿ ಬೇರೆಯೇ ಬರೆದಿತ್ತು. 

ಡಾ. ಅಝೀಜ್ ಅವರ ನಿಧನದ ಬಳಿಕ ಅವರನ್ನು ಸ್ಮರಿಸಿಕೊಂಡಿರುವ ಅವರಲ್ಲಿ ಚಿಕಿತ್ಸೆ ಪಡೆದ ಅಲೋಕ್ ಸಿಂಗ್ ಎಂಬವರು "ನೀವು ಯಾಕೆ ಇಷ್ಟು ಕಡಿಮೆ ಶುಲ್ಕ ಪಡೆಯುತ್ತೀರಿ ಎಂದು ನಾನು ಕೇಳಿದ್ದಕ್ಕೆ, ನನಗೆ ಅಲ್ಲಾಹನಿಗೆ ಉತ್ತರ ನೀಡಬೇಕಿದೆ ಎಂದು ಹೇಳಿದ್ದರು. ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಅಗಲುತ್ತಾರೆ ಎಂದು ಭಾವಿಸಿರಲಿಲ್ಲ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News