ಕೊರೋನ ಬಗ್ಗೆ ಒಳ್ಳೆಯ ಸುದ್ದಿಗೆ ಹಾತೊರೆಯುತ್ತಿದೆಯೇ ಮನಸ್ಸು?

Update: 2020-07-20 12:31 GMT
ಸಾಂದರ್ಭಿಕ ಚಿತ್ರ

ಇತ್ತೀಚಿಗಿನ ದಿನಗಳಲ್ಲಿ ಏರುತ್ತಿರುವ ಕೊರೊನ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಆತಂಕ ಮೂಡಿಸುತ್ತಿವೆ. ಈ ನಡುವೆ ನಮ್ಮಲ್ಲಿ ಆಶಾಭಾವನೆ ಮೂಡಿಸುವ ಕೆಲ ಧನಾತ್ಮಕ ಬೆಳವಣಿಗೆಗಳತ್ತವೂ ಗಮನ ನೀಡಬೇಕು.

ಈ ಕೊರೊನ ಬಿಕ್ಕಟ್ಟಿನ ನಡುವೆಯೂ ಆಶಾವಾದವಿದೆಯೆಂಬುದನ್ನು ನಮಗೆ ನೆನಪಿಸುವ ಆರು ಧನಾತ್ಮಕ ಬೆಳವಣಿಗೆಗಳು ಇಲ್ಲಿವೆ.
 
ಥೆರಪಿ ಚಿಕಿತ್ಸೆಗಳು (ಈಗ ಸೋಂಕಿನಿಂದ ಬಹಳಷ್ಟು ಅನಾರೋಗ್ಯಕ್ಕೀಡಾಗಿರುವವರಿಗೆ ನೀಡಲಾಗುತ್ತಿರುವ ಚಿಕಿತ್ಸೆಗೆ ಹೊರತಾಗಿ) ಲಸಿಕೆಗಿಂತ ಮೊದಲೇ ಆಗಮಿಸಲಿವೆ. ಒಬ್ಬರಿಗೆ ಕೊರೊನವೈರಸ್ ಸೋಂಕು ತಗಲಿದಾಗ ಆವರ ದೇಹದ ರೋಗನಿರೋಧಕ ವ್ಯವಸ್ಥೆ ಹೋರಾಡಲು ಆರಂಭಿಸುವುದರ ಜತೆಗೆ ಸೋಂಕಿನ ದಾಳಿಯ ವಿರುದ್ಧ ಹೋರಾಡಲು ರಕ್ತದಲ್ಲಿ ಪರಿಚಲನೆಗೈಯ್ಯುವ ಪ್ರತಿಕಾಯಗಳನ್ನು ಉತ್ಪಾದಿಸುತ್ತವೆ. ಈ ಪ್ರತಿಕಾಯಗಳು ನಮಗೆ ಭವಿಷ್ಯದಲ್ಲಿ ಸೋಂಕಿನಿಂದ ಸ್ವಲ್ಪ ರಕ್ಷಣೆ ನೀಡುತ್ತವೆ (ಆದರೆ ಎಷ್ಟು ಸಮಯ ಎಂದು ತಿಳಿದಿಲ್ಲ). ಇದೀಗ ವಿಜ್ಞಾನಿಗಳು ಈ ಪ್ರತಿಕಾಯಗಳ ಕ್ಲೋನ್‍ಗಳನ್ನು ಅಭಿವೃದ್ಧಿ ಪಡಿಸಿದ್ದು ಇವುಗಳನ್ನು ಮೊನೊಕ್ಲೋನಲ್ ಪ್ರತಿಕಾಯಗಳು ಎಂದು ಹೇಳಲಾಗುತ್ತದೆ. ಇವುಗಳೂ ಚಿಕಿತ್ಸೆಗೆ ಹಾಗೂ ಸೋಂಕು ತಡೆಯಲು ಸಹಕಾರಿ ಎಂದು ತಿಳಿದು ಬರಲಾರಂಭಿಸಿವೆ. ಇವುಗಳು ಕೊರೊನವೈರಸ್ ನಮ್ಮ ಜೀವಕೋಶಗಳನ್ನು ಪ್ರವೇಶಿಸಲು ಬಳಸುವ ಸ್ಪೈಕ್ ಪ್ರೊಟೀನ್ ಮೇಲೆ ದಾಳಿ ನಡೆಸಿ ಕೆಲಸ ಮಾಡುತ್ತವೆ. ಹೀಗೆ ಈ ಮೊನೊಕ್ಲೋನ್‍ಗಳು ನಮ್ಮ ದೇಹದೊಳಗೆ ವೈರಾಣುಗಳು ಹೆಚ್ಚುಗೊಳ್ಳಲು ಆಸ್ಪದ ನೀಡುವುದಿಲ್ಲ.

►ರ್ಯಾಪಿಡ್- ಕಡಿಮೆ ವೆಚ್ಚದ  ಉಗುಳು ಪರೀಕ್ಷೆ (ಸಲೈವ ಟೆಸ್ಟ್)  ಕೂಡ ಬರಲಿವೆ. ಇವುಗಳು ಮನೆಯಲ್ಲಿಯೇ ನಡೆಸುವ ಪ್ರೆಗ್ನೆನ್ಸಿ ಟೆಸ್ಟ್ ನಂತೆಯೇ ಸುಲಭವಾಗಿದ್ದು, ನೀವು ಪ್ರತಿ ದಿನ ಪರೀಕ್ಷೆ ಮಾಡಲು ಸುಲಭ.  ಒಂದು ಸೀಸೆಗೆ ಉಗುಳಿದರೆ ಮುಗಿಯಿತು, ಕೆಲವೇ ನಿಮಿಷಗಳಲ್ಲಿ ಫಲಿತಾಂಶ ದೊರೆಯಲಿದ್ದು ಇದರ ಬೆಲೆ 1$ನಿಂದ 5$ನಷ್ಟಿರಬಹುದು.

►ಮಾಸ್ಕ್ ಗಳು ಕೋವಿಡ್ ವಿರುದ್ಧ ಪರಿಣಾಮಕಾರಿಯೇ ಎಂಬ ಬಗ್ಗೆ ಚರ್ಚೆಗಳೂ ನಡೆದಿವೆ, ಆದರೆ ಆ ಚರ್ಚೆಗಳು ಈಗ ಮುಗಿದ ಅಧ್ಯಾಯ. ಮಾಸ್ಕ್ ಗಳು ಪರಿಣಾಮಕಾರಿ. ಮಾಸ್ಕ್ ಗಳನ್ನು ಎಲ್ಲರೂ ಧರಿಸುವಂತಾಗಲು ಮೂರು ತಿಂಗಳುಗಳೇ ಬೇಕಾಯಿತು, ಈಗ ಜಗತ್ತಿನೆಲ್ಲೆಡೆ ಮಾಸ್ಕ್ ಧರಿಸುವ ಅಭ್ಯಾಸವನ್ನು ಜನರು ರೂಢಿಸಿಕೊಂಡಿದ್ದಾರೆ. ಎಲ್ಲಾ ಮಾಸ್ಕ್ ಗಳೂ ಪರಿಣಾಮಕಾರಿಯಲ್ಲ, ಆದುದರಿಂದ ಕೊರೋನ ವಿರುದ್ಧ ರಕ್ಷಿಸಲು ಯಾವ ಮಾಸ್ಕ್ ಪರಿಣಾಮಕಾರಿ ಎಂಬುದಕ್ಕೆ ಮಾರ್ಗಸೂಚಿಗಳಿವೆ.
 
►ಕೊರೋನವೈರಸ್ ಗಾಳಿ ಮೂಲಕವೂ ಹರಡುತ್ತದೆ ಎಂಬ ಕುರಿತು ಈಗ ಕೊನೆಗೂ ಸಹಮತ ಮೂಡಿದೆ. ನನ್ನ ಕ್ಷೇತ್ರದ ವಿಜ್ಞಾನಿಗಳು ಈ ಕುರಿತು ತಿಂಗಳುಗಳಿಂದ ಎಚ್ಚರಿಸುತ್ತಿದ್ದರೂ ಪ್ರಯೋಜನವಾಗದೆ ಕೊನೆಗೆ ಕಳೆದ ವಾರ  239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು  ಕೊರೊನವೈರಸ್ ಗಾಳಿ ಮೂಲಕವೂ ಹರಡುತ್ತದೆ  ಎಂದು ಒಪ್ಪಿಕೊಳ್ಳಲು ಮನವಿ ಮಾಡಿದ್ದರು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯೂ ಹಾಗೆಯೇ ಮಾಡಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೆಲವೊಂದು ಹೊಸ ಮಾರ್ಗಸೂಚಿಗಳೂ ಬರಬಹುದು, ಇವುಗಳೆಂದರೆ ಆರೋಗ್ಯಯುತ ನಿರ್ಮಾಣ  ತಂತ್ರಜ್ಞಾನ,  ಎತ್ತರದಲ್ಲಿ ಕಿಟಿಕಿಗಳ ನಿರ್ಮಾಣ, ಫಿಲ್ಟ್ರೇಶನ್ ಹಾಗೂ ಪೋರ್ಟೇಬಲ್  ಏರ್ ಕ್ಲೀನಿಂಗ್ ಸಾಧನಗಳ ಬಳಕೆಗೆ ಪ್ರೋತ್ಸಾಹ ದೊರೆಯಬಹುದು.
 
►ಈ ಹಿಂದೆ ಸಾಮಾನ್ಯ ಶೀತದ ಕೊರೋನವೈರಸ್ ಸೋಂಕಿಗೆ ಒಳಗಾದವರಿಗೆ ಈ ಸೋಂಕಿನಿಂದ ರಕ್ಷಣೆ ದೊರೆಯಬಹುದೆಂಬ ಕುರಿತೂ ಕೆಲ  ಸಂಶೋಧನೆಗಳು ತಿಳಿಸುತ್ತದೆ. ಇದೊಂದು ದೊಡ್ಡ ಹೇಳಿಕೆ ಆದರೆ ಅದು ಶೇ. 100ರಷ್ಟು  ವಾಸ್ತವ ಎಂದು ಹೇಳಲಾಗದು. ಆದರೆ  ಕೋವಿಡ್-19ಗೆ ಈ ಹಿಂದೆ ತುತ್ತಾಗದವರ ಪೈಕಿ ಶೇ. 20ರಿಂದ ಶೇ 50ರಷ್ಟು ಮಂದಿಯಲ್ಲಿ ಟಿ-ಸೆಕ್ಸ್ ಎಂಬ ರೊಗನಿರೋಧಕ ಜೀವಕೋಶಗಳು ಇದ್ದು ಇವುಗಳು ಹೊಸ ವೈರಾಣುವಿನ ವಿರುದ್ಧ ಹೋರಾಡುತ್ತವೆ, ಈ ಹಿಂದೆ ಸಾಮಾನ್ಯ ನೆಗಡಿ ಕೊರೋನ ವೈರಸ್‍ಗೆ ಅವರು ತುತ್ತಾಗಿರುವುದರಿಂದ ಹೀಗಾಗಿರಬಹುದೆಂದು ವಿಜ್ಞಾನಿಗಳ ಅಂಬೋಣ.
 
►ಲಸಿಕೆ ಪ್ರಯೋಗಗಳು ಕೆಲಸ ಮಾಡುತ್ತಿವೆ ಎಂದು ಕಾಣುತ್ತಿದೆ. ಅಕ್ಟೋಬರ್ ಒಳಗಾಗಿ ಇವು ಲಭ್ಯವಾಗಬಹುದು ಎಂದು ಕೆಲ ತಯಾರಕರು ಹೇಳುತ್ತಿದ್ದಾರೆ. ಲಸಿಕೆಗಳು ಸಂಪೂರ್ಣವಾಗಿ ಪರಿಣಾಮಕಾರಿ ಎಂದು ಹೇಳಲು ಸಾಧ್ಯವಿಲ್ಲವಾದರೂ ಆರಂಭಿಕ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಸಕಾರಾತ್ಮಕವಾಗಿವೆ. ಅತಿ ಶೀಘ್ರ ಎಂದರೆ 12 ತಿಂಗಳುಗಳೊಳಗಾಗಿ ಲಸಿಕೆಗಳು ದೊರೆಬಹುದು. ಲಸಿಕೆಗಳು ಲಭ್ಯವಾಗಿ ನಂತರ ಅವುಗಳು ಜನರಿಗೆ ತಲುಪಲು ಇನ್ನು ಕೆಲ ತಿಂಗಳುಗಳು ಬೇಕಾಗಬಹುದು. ಜನರು ಲಸಿಕೆ ಹಾಕಿಸಿಕೊಂಡ ನಂತರವಷ್ಟೇ ಸಂಪೂರ್ಣ ಚಿತ್ರಣ ಹೊರಹೊಮ್ಮಬಹುದು.

ಕೃಪೆ: www.washingtonpost.com

Writer - ಜೋಸೆಫ್ ಜಿ ಅಲ್ಲೆನ್

contributor

Editor - ಜೋಸೆಫ್ ಜಿ ಅಲ್ಲೆನ್

contributor

Similar News