×
Ad

ವೇತನ ರಹಿತ ರಜೆ, ವೇತನ ಕಡಿತ; ಏರ್ ಇಂಡಿಯಾ ನೌಕರರ ಒಕ್ಕೂಟ ತರಾಟೆ

Update: 2020-07-20 19:48 IST

ಹೊಸದಿಲ್ಲಿ, ಜು. 20: ಏರ್ ಇಂಡಿಯಾದ ವೇತನ ಕಡಿತ ಹಾಗೂ ವೇತನ ರಹಿತ ರಜೆ ಸೇರಿದಂತೆ ವಿವಿಧ ವೆಚ್ಚ ಕಡಿತ ಯೋಜನೆಗೆ ಏರ್ ಇಂಡಿಯಾದ ವಿವಿಧ ನೌಕರರ ಒಕ್ಕೂಟ ಏರ್ ಇಂಡಿಯಾದ ಆಡಳಿತ ಮಂಡಳಿಯನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ನೌಕರರ ಒಕ್ಕೂಟದೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ವೆಚ್ಚ ಕಡಿತಗೊಳಿಸಲು ಏರ್ ಇಂಡಿಯಾ ನಡೆಸಿದ ವೇತನ ಪುನಾರ್ರಚನೆ ಕ್ರಮಗಳನ್ನು ಏರ್ ಇಂಡಿಯಾ ಪೈಲೆಟ್‌ಗಳ ಒಕ್ಕೂಟ, ಇಂಡಿಯನ್ ಕಮರ್ಷಿಯಲ್ ಪೈಲೆಟ್ ಅಸೋಶಿಯೇಶನ್ ಟೀಕಿಸಿದೆ. ಈ ಕುರಿತ ಮಾತುಕತೆ ಏರ್ ಇಂಡಿಯಾದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಸಾಮರಸ್ಯದಿಂದ ಕೂಡಿರಲಿಲ್ಲ. ಈ ಏಕಪಕ್ಷೀಯ ನಿರ್ಧಾರ ಏರ್ ಇಂಡಿಯಾದ ಹಿತಾಸಕ್ತಿಗೆ ಪೂರಕವಲ್ಲ ಎಂದು ಒಕ್ಕೂಟಗಳು ಹೇಳಿವೆ. ವೆಚ್ಚ ಕಡಿತವನ್ನು ಸಮರ್ಥಿಸಿಕೊಂಡಿರುವ ಏರ್ ಇಂಡಿಯಾದ ಆಡಳಿತ ಮಂಡಳಿ, ಇದು ಈ ಅವಧಿಯಲ್ಲಿ ಉದ್ಯೋಗಿಗಳು ಇನ್ನೊಂದು ಉದ್ಯೋಗದಾತರಲ್ಲಿ ತೊಡಗಿಸಿಕೊಳ್ಳಲು ಸ್ವಾತಂತ್ರ ನೀಡುತ್ತದೆ. ಇನ್ನೊಂದೆಡೆ ಸಂಸ್ಥೆಯು ಹಣದ ಹರಿವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದೆ.

ಈ ಹಿಂದಿನ ಹೇಳಿಕೆಯಲ್ಲಿ ಏರ್ ಇಂಡಿಯಾ, ಹಣಕಾಸಿನ ಸವಾಲು ಇರುವ ಈ ಸನ್ನಿವೇಶದಲ್ಲಿ ವಿಮಾನ ಸೇವೆಯನ್ನು ಮುಂದುವರಿಸುವ ದೃಷ್ಟಿಯಿಂದ ಸಂಸ್ಥೆ ಹಲವು ಉಪಕ್ರಮಗಳನ್ನು ಅನುಸರಿಸುತ್ತಿದೆ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News