ಸಚಿನ್ ಪೈಲಟ್ ನಿಷ್ಪ್ರಯೋಜಕ ವ್ಯಕ್ತಿ: ಅಶೋಕ್ ಗೆಹ್ಲೋಟ್ ವಾಗ್ದಾಳಿ

Update: 2020-07-20 16:33 GMT

ಜೈಪುರ, ಜು.20: ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪೈಲಟ್ ಓರ್ವ ನಿಷ್ಪ್ರಯೋಜಕ ವ್ಯಕ್ತಿ ಎಂದು ಟೀಕಿಸಿದ್ದಾರೆ.

‘ಏನೂ ಕೆಲಸ ಮಾಡದ ನಿಷ್ಪ್ರಯೋಜಕ, ಸೋಮಾರಿ ವ್ಯಕ್ತಿ ಕಳೆದ 7 ವರ್ಷಗಳಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದರೂ ಪಕ್ಷಕ್ಕಾಗಿ ಏನನ್ನೂ ಮಾಡಿಲ್ಲ. ಆದರೂ ಪಕ್ಷದ ಹಿತಚಿಂತನೆಯ ದೃಷ್ಟಿಯಿಂದ ತಾನು ಸುಮ್ಮನಿದ್ದೆ. ಒಬ್ಬನೇ ವ್ಯಕ್ತಿ 7 ವರ್ಷಗಳಿಂದ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದ ಏಕೈಕ ರಾಜ್ಯ ರಾಜಸ್ತಾನವಾಗಿದೆ. ಆತ ನಿಷ್ಪ್ರಯೋಜಕ . ಆತನಿಂದ ಏನೂ ಸಾಧ್ಯವಿಲ್ಲ ಎಂದು ತಮಗೆಲ್ಲಾ ತಿಳಿದಿತ್ತು. ಆದರೂ ಹುದ್ದೆ ಬದಲಾವಣೆಯ ಬಗ್ಗೆ ಚಕಾರವೆತ್ತದೆ ಸಹಿಸಿಕೊಂಡಿದ್ದೆವು ’ ಎಂದು ಸಚಿನ್ ಪೈಲಟ್ ಹೆಸರೆತ್ತದೆ ಪರೋಕ್ಷವಾಗಿ ಟೀಕಿಸಿದ್ದಾರೆ.

ತನ್ನ ಸರಕಾರವನ್ನು ಉರುಳಿಸುವ ಪಿತೂರಿಯ ಬಗ್ಗೆ ಮಾತಾಡಿದಾಗ ಯಾರು ಕೂಡಾ ಮುಗ್ಧ ಮುಖದ, ನಿರರ್ಗಳವಾಗಿ ಇಂಗ್ಲಿಷ್ ಹಾಗೂ ಹಿಂದಿ ಮಾತನಾಡುವ ಮತ್ತು ದೇಶದಾದ್ಯಂತ ಮಾಧ್ಯಮಗಳ ಮೇಲೆ ಪ್ರಭಾವ ಹೊಂದಿರುವ ಆತ (ಪೈಲಟ್) ಹೀಗೆ ಮಾಡುತ್ತಾನೆ ಎಂದು ನಂಬಲು ತಯಾರಿರಲಿಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News