ಕೇರಳ: ಲಾಕ್‌ಡೌನ್ ಸಮಯದಲ್ಲಿ 66 ವಿದ್ಯಾರ್ಥಿಗಳ ಆತ್ಮಹತ್ಯೆ

Update: 2020-07-20 16:38 GMT

ತಿರುವನಂತಪುರಂ, ಜು.20: ಲಾಕ್‌ಡೌನ್ ಅವಧಿಯಲ್ಲಿ ಕೇರಳದಲ್ಲಿ 66 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ನಿಂದಾಗಿ ಒಬ್ಬಂಟಿಯಾಗಿ, ಪ್ರತ್ಯೇಕವಾಗಿ ಇರುವ ಸಂದರ್ಭ ಹೆಚ್ಚಿದ್ದು ಇದು ಮಕ್ಕಳ ಮನಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ 66 ಪ್ರಕರಣಗಳಲ್ಲಿ ಕೆಲವಂತೂ ಮೊಬೈಲ್ ಗೇಮ್ ಆಡಿದ್ದಕ್ಕೆ ಅಥವಾ ಆನ್‌ಲೈನ್ ತರಗತಿ ತಪ್ಪಿಸಿಕೊಂಡಿದ್ದಕ್ಕೆ ಮನೆಯವರು ಆಕ್ಷೇಪಿಸಿದ ಕ್ಷುಲ್ಲಕ ಕಾರಣಗಳೂ ಇವೆ. ಈ ಹಿನ್ನೆಲೆಯಲ್ಲಿ, ಡಿಜಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು 12ರಿಂದ 18 ವರ್ಷದವರು. ಎಲ್ಲಾ ಆತ್ಮಹತ್ಯೆ ಪ್ರಕರಣಗಳಿಗೂ ಲಾಕ್‌ಡೌನ್ ಕಾರಣ ಎನ್ನಲಾಗದು. ಮನೆಯಲ್ಲಿ ಜಗಳ, ಹೆತ್ತವರ ಒತ್ತಡ ಅಥವಾ ನಿರ್ಲಕ್ಷ್ಯ, ನಿಂದನೆ ಮುಂತಾದ ಕಾರಣಗಳೂ ಇವೆ ಎಂದು ರಾಜ್ಯದ ಕ್ರೈಂ ರೆಕಾರ್ಡ್ಸ್ ಬ್ಯೂರೊ(ಅಪರಾಧ ದಾಖಲೆ ವಿಭಾಗ)ದ ಅಂಕಿಅಂಶ ಬಿಡುಗಡೆಗೊಳಿಸಿದ ವಿಜಯನ್ ಹೇಳಿದರು.

ಕಳೆದ ಕೆಲ ವಾರಗಳಲ್ಲಿ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ಮುಖ್ಯಮಂತ್ರಿ ನಡೆಸುವ ದೂರವಾಣಿ ಮೂಲಕ ಸಲಹೆ ನೀಡುವ ‘ಚಿರಿ’(ನಗು) ಕಾರ್ಯಕ್ರಮ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ನಡೆಸುವ ದೂರವಾಣಿ ಮೂಲಕ ಸಲಹೆ ಕಾರ್ಯಕ್ರಮದ ಜೊತೆಗೆ, ಕೇರಳ ಪೊಲೀಸರೂ ಹಲವು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ.

 ಜೂನ್‌ನಲ್ಲಿ, ಮಲಪ್ಪುರಂ ಜಿಲ್ಲೆಯ 15 ವರ್ಷದ ದಲಿತ ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ದುಗುಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವ್ಯಾಪಕ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News