ದಿಲ್ಲಿ ಹಿಂಸಾಚಾರ: ಬಿಜೆಪಿ ಮುಖಂಡರ ವಿರುದ್ಧದ 8 ಪ್ರಕರಣಗಳನ್ನು ಕೈಬಿಟ್ಟ ಪೊಲೀಸರು

Update: 2020-07-21 15:17 GMT

ಹೊಸದಿಲ್ಲಿ, ಜು.21: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂಬ ದೂರಿನ ಬಗ್ಗೆ ಕ್ರಮ ಕೈಗೊಳ್ಳದಿರುವ ದಿಲ್ಲಿ ಪೊಲೀಸರು ಬಿಜೆಪಿ ಮುಖಂಡರ ವಿರುದ್ಧದ 8 ಆರೋಪದ ಬಗ್ಗೆಯೂ ನಿರ್ಲಕ್ಷ ವಹಿಸಿದ್ದಾರೆ ಎಂದು ndtv.com ವರದಿ ಮಾಡಿದೆ. ನಾಲ್ಕು ಆರೋಪಗಳಲ್ಲಿ ಎಫ್‌ಐಆರ್ ದಾಖಲಿಸಿಲ್ಲ, ಉಳಿದ ನಾಲ್ಕು ಆರೋಪಗಳಲ್ಲಿ ಸಲ್ಲಿಸಿರುವ ಎಫ್‌ಐಆರ್‌ಗಳು ದೂರಿಗೆ ಸಂಬಂಧಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿರುವುದಾಗಿ ndtv.com ವರದಿ ಮಾಡಿದೆ. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಶಾಸಕ ಮೋಹನ್ ಸಿಂಗ್, ಮಾಜಿ ಶಾಸಕ ಜಗದೀಶ್ ಪ್ರಧಾನ್, ಸಂಸದ ಸತ್ಯಪಾಲ್ ಸಿಂಗ್, ಕೌನ್ಸಿಲರ್ ಕನ್ಹಯ್ಯ ಲಾಲ್‌ರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮುಹಮ್ಮದ್ ರಿಝ್ವಿ ಎಂಬವರು ಸಲ್ಲಿಸಿದ್ದ ದೂರಿನಲ್ಲಿ ಕಪಿಲ್ ಮಿಶ್ರಾರ ಹೆಸರನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಪೌರತ್ವ ಕಾಯ್ದೆ ವಿರೋಧಿಸಿ ಈಶಾನ್ಯ ದಿಲ್ಲಿಯ ಕದಂಪುರಿಯಲ್ಲಿ ಫೆಬ್ರವರಿ 23ರಂದು ನಡೆದ ಪ್ರತಿಭಟನಾ ಸ್ಥಳಕ್ಕೆ ಬೆಂಬಲಿಗರೊಂದಿಗೆ ಬಂದಿದ್ದ ಮಿಶ್ರಾ, ಪ್ರತಿಭಟನಾಕಾರರಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದಿದ್ದರು. ಇವರೊಂದಿಗಿದ್ದ ಬೆಂಬಲಿಗರು ಗನ್, ಖಡ್ಗ, ರಾಡು, ದೊಣ್ಣೆ, ಕಲ್ಲು ಮತ್ತಿತರ ಆಯುಧಗಳನ್ನು ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಫೆಬ್ರವರಿ 23ರಂದು ಕಪಿಲ್ ಮಿಶ್ರಾ ಮತ್ತವರ ಬೆಂಬಲಿಗರು ಹಿಂಸಾತ್ಮಕ ರೀತಿಯಲ್ಲಿ ವರ್ತಿಸುತ್ತಿರುವುದನ್ನು ತಾನು ಕಂಡಿರುವುದಾಗಿ ಮಾರ್ಚ್ 17ರಂದು ಮುಹಮ್ಮದ್ ಇಲ್ಯಾಸ್ ಎಂಬವರು ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿದೆ. ಮಿಶ್ರಾ ಜೊತೆಗಿದ್ದ ಚಾವ್ಲಾ ಎಂಬಾತ ತನ್ನ ಮೊಬೈಲ್‌ನಲ್ಲಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್‌ರನ್ನು ಸಂಪರ್ಕಿಸಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯ ಕೈಗೆ ಫೋನ್ ನೀಡಿದ. ಅಧಿಕಾರಿ ‘ಸರ್, ಸರ್’ ಎಂದು ವಿನಯ ಪ್ರದರ್ಶಿಸಿದ. ಬಳಿಕ ಅಲ್ಲಿದ್ದ ಕಪಾಟಿನಲ್ಲಿರುವ ಹಣವನ್ನೆಲ್ಲಾ ಸಂಸದರಿಗೆ ತಲುಪಿಸುವಂತೆ ಚಾವ್ಲಾ ಅಧಿಕಾರಿಗೆ ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮೂರನೇ ದೂರನ್ನು (ಇನ್ನೂ ಎಫ್‌ಐಆರ್ ದಾಖಲಿಸಿಲ್ಲ) ಮಾರ್ಚ್ 19ರಂದು ರೂಬಿನಾ ಬಾನೊ ಎಂಬವರು ಸಲ್ಲಿಸಿದ್ದಾರೆ. ಹಿಂಸಾಚಾರದ ಸಂದರ್ಭ ಶಾಸಕ ಮೋಹನ್ ಸಿಂಗ್ ಜತೆಗಿದ್ದವರನ್ನು ಚುನಾವಣೆಯ ಪ್ರಚಾರದ ಸಂದರ್ಭವೂ ಸಿಂಗ್ ಜತೆ ಕಂಡಿದ್ದೇನೆ. ಸಿಎಎ ವಿರೋಧಿಸಿ ಚಾಂದ್‌ಬಾಗ್‌ನಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಇವರು ಭಾರೀ ಶಸ್ತ್ರಾಸ್ತ್ರ ಸಜ್ಜಿತ ಬೆಂಬಲಿಗರೊಂದಿಗೆ ಅಲ್ಲಿಗೆ ಬಂದಿದ್ದರು. ಅಲ್ಲದೆ ಸ್ಥಳದಲ್ಲಿದ್ದ ದಯಾಳ್‌ಪುರ ಠಾಣಾಧಿಕಾರಿ ಪೊಲೀಸ್ ಉಪಾಯುಕ್ತರಿಗೆ ಮೊಬೈಲ್ ನೀಡಿ, ಕಪಿಲ್ ಮಿಶ್ರಾ ಮಾತಾಡುತ್ತಿದ್ದಾರೆ ಎಂದಿದ್ದರು. ಫೋನ್ ಕರೆ ಸ್ವೀಕರಿಸಿದ ಉಪಾಯುಕ್ತರು ‘ ನೀವೇನೂ ಚಿಂತಿಸಬೇಡಿ. ಈ ಗುಂಪನ್ನು ನಾವು ಚದುರಿಸುತ್ತೇವೆ. ಇವರ ಸಂತಾನದವರೂ ಮರೆಯಲಾಗದ ಪಾಠ ಕಲಿಸುತ್ತೇವೆ ’ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತರ ನಾಲ್ಕು ಪ್ರಕರಣಗಳಲ್ಲಿ ತಾವು ನೀಡಿದ್ದ ದೂರನ್ನು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿರದ ಎಫ್‌ಐಆರ್ ಜೊತೆ ಜೋಡಿಸಲಾಗಿದೆ. ಈ ದೂರುಗಳಲ್ಲಿ ಕಪಿಲ್ ಮಿಶ್ರಾ, ಮಾಜಿ ಶಾಸಕ ಜಗದೀಶ್ ಪ್ರಧಾನ್ ಹಾಗೂ ಆರೆಸ್ಸೆಸ್‌ಗೆ ಸಂಬಂಧಿಸಿದ ವ್ಯಕ್ತಿಗಳ ಹೆಸರಿದೆ ಎಂದು ದೂರುದಾರರು ಹೇಳಿರುವುದಾಗಿ ಸುದ್ಧಿಸಂಸ್ಥೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News