ಪಾಟ್ನಾ ಆಸ್ಪತ್ರೆಯಲ್ಲಿ ಕೊರೋನ ರೋಗಿಯ ಮೃತದೇಹ, ರೋಗಿಗಳು ಒಂದೇ ವಾರ್ಡ್‌ನಲ್ಲಿ !

Update: 2020-07-21 16:12 GMT
ಸಾಂದರ್ಭಿಕ ಚಿತ್ರ

ಪಾಟ್ನಾ (ಬಿಹಾರ್), ಜು. 21: ಪಾಟ್ನಾದಲ್ಲಿರುವ ನಲಂದಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಅವ್ಯವಸ್ಥೆ ಕುರಿತ ಹೊಸ ವೀಡಿಯೊವೊಂದು ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳ ವಿಲೇವಾರಿ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದು ಕಳವಳಪಡಬೇಕಾದ ವಿಚಾರ. ಆದರೆ, ನಾವು ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ವಿಲೇವಾರಿ ಮಾಡುವ ಸಂದರ್ಭ ಶಿಷ್ಟಾಚಾರ ಅನುಸರಿಸಬೇಕಾಗಿದೆ ಎಂದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ.

ಆಸ್ಪತ್ರೆಯ ಕಾರಿಡಾರ್‌ನಲ್ಲಿ ಕೊರೋನ ರೋಗಿಯ ಮೃತದೇಹದ ಇದ್ದು, ಕಾರಿಡಾರ್‌ನ ಸಮೀಪ ಇರುವ ವಾರ್ಡ್‌ನ ಬೆಡ್‌ನಲ್ಲಿ ರೋಗಿಗಳು ಮಲಗಿರುವುದು ಈ ವೀಡಿಯೊದಲ್ಲಿ ದಾಖಲಾಗಿದೆ. ಅದೇ ಕೊಠಡಿಯಲ್ಲಿ ರೋಗಿಗಳ ಕುಟುಂಬಿಕರು ಕೂಡ ಇರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಎರಡು ದಿನಗಳಲ್ಲಿ ವೈರಲ್ ಆಗುತ್ತಿರುವ ಇಂತಹ ಎರಡನೇ ವೀಡಿಯೊ ಇದಾಗಿದೆ.

ವ್ಯಕ್ತಿಯೋರ್ವ ದಾಖಲಿಸಿದ ಈ ವೀಡಿಯೊದಲ್ಲಿ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಶವ ಇರುವುದು ಕಂಡು ಬಂದಿದೆ. ‘‘ಇದು ಮೃತದೇಹ’’ ಎಂದು ಹೇಳುತ್ತಾ ಆತ ಕೆಮರಾವನ್ನು ರೋಗಿಗಳಿಂದ ತುಂಬಿಕೊಂಡಿರುವ ವಾರ್ಡ್‌ನತ್ತ ಕೊಂಡೊಯ್ದಿದ್ದಾನೆ. ನೆಲದಲ್ಲಿ ಮಲಗಿರುವ ಮಹಿಳೆಯೋರ್ವರನ್ನು ‘ಆಂಟಿ’ ಎಂದು ಆತ ಕರೆಯತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಅನಂತರ ಆತ ಆಸ್ಪತ್ರೆಯಲ್ಲಿ ಮೃತದೇಹ ಇರುವ ಬಗ್ಗೆ ಕೇಳುತ್ತಾನೆ. ಅದಕ್ಕೆ ಕೆಲವು ಗಂಟೆಗಳಾಯ್ತು ಎಂಬ ಪ್ರತ್ಯುತ್ತರ ಬರುತ್ತದೆ. ಯಾರಾದರೂ ಬಂದಿದ್ದಾರೆಯೇ ? ಈ ಮೃತದೇಹವನ್ನು ಯಾವಾಗ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಯಾರಾದರೂ ಹೇಳಿದ್ದಾರೆಯೇ ? ಎಂದು ಆ ವ್ಯಕ್ತಿ ಕೇಳುತ್ತಾನೆ. ಅದಕ್ಕೆ ಮೃತ ಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯೆ ಎಂದು ಹೇಳಬಹುದಾದ ಮಹಿಳೆ ‘ಇಲ್ಲ’ ಎಂದು ಹೇಳಿ ಅಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News