ಪ್ರಧಾನಿ ಯೋಜನೆಗಳ ಪ್ರಚಾರ ತಂಡದಲ್ಲಿ ಪೊಲೀಸ್ ಅಧಿಕಾರಿಯ ಗುಂಪು ಹತ್ಯೆ ಆರೋಪಿ!

Update: 2020-07-21 17:10 GMT

ಮೀರತ್, ಜು. 21: ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹತ್ಯೆಗೆ ಕಾರಣವಾದ 2018ರ ಬುಲಂದ್ಶಹರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿಖರ್ ಅಗರ್ವಾಲ್ ನನ್ನು ಪ್ರಧಾನ ಮಂತ್ರಿ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇಲಾಖೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶನಿವಾರ ವಜಾಗೊಳಿಸಲಾಗಿದೆ. 

ಜುಲೈ 14ರಂದು ನಡೆದ ಕಾರ್ಯಕ್ರಮದಲ್ಲಿ ಬುಲಂದ್ ಶಹರ್ನ ಬಿಜೆಪಿ ಅಧ್ಯಕ್ಷ ಅನಿಲ್ ಸಿಸೋಡಿಯಾ ಅವರು ಶಿಖರ್ ಅಗರ್ವಾಲ್ ನನ್ನು ಸನ್ಮಾನಿಸುತ್ತಿರುವ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಹಾಗೂ ವಿವಾದಕ್ಕೆ ಒಳಗಾಗಿತ್ತು. ಮೃತ ಪೊಲೀಸ್ ಅಧಿಕಾರಿ ಸಿಂಗ್ ಅವರ ಪತ್ನಿ ಈ ಕುರಿತು ವೀಡಿಯೊಂದರಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರು ಟ್ವೀಟ್ ಮಾಡಿದ್ದರು. ಅನಂತರ ಪ್ರಧಾನ ಮಂತ್ರಿ ಜನಕಲ್ಯಾಣಕಾರಿ ಯೋಜನ ಜಾಗೃತ ಅಭಿಯಾನ (ಪಿಎಂಜೆವೈಜೆಎ)ದ ಸ್ಥಳೀಯ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಿಖರ್ ಅಗರ್ವಾಲ್ ನನ್ನು ವಜಾಗೊಳಿಸಲಾಗಿದೆ. 

ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರು ಗುಂಪಿನಿಂದ ದಾಳಿಗೊಳಗಾದ 2018ರ ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಶಿಖರ್ ಅಗರ್ವಾಲ್ ಹಾಗೂ ಇತರ ಐದು ಮಂದಿ ಆರೋಪಿಗಳು. ಗೋಹತ್ಯೆಯ ವದಂತಿ ಹಿನ್ನೆಲೆಯಲ್ಲಿ ಉದ್ಭವಿಸಿದ ಹಿಂಸಾಚಾರದ ಬಳಿಕ ಶಾಂತಿ ಸುವ್ಯವಸ್ಥೆ ಕಾಪಾಡಲು ಬುಲಂದ್ ಶಹರ್ ಗೆ ಸುಬೋಧ್ ಯಾದವ್ ತೆರಳಿದ್ದರು. ಪ್ರಕರಣದ ಆರೋಪಿಯಾಗಿರುವ ಶಿಖಾರ್ ಅಗರ್ವಾಲ್ ಈಗ ಜಾಮೀನಲ್ಲಿ ಇದ್ದಾನೆ. 

‘‘ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹತ್ಯೆಯಾಗಿರುವ ಹಿಂಸಾಚಾರ ಪ್ರಕರಣದಲ್ಲಿ ಶಿಖರ್ ಅಗರ್ವಾಲ್ ಆರೋಪಿ ಎಂಬುದು ನನಗೆ ಮಾಧ್ಯಮದ ಮೂಲಕ ತಿಳಿಯಿತು. ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಯಿತು ಹಾಗೂ ಶಿಖರ್ ಅಗರ್ವಾಲ್ ನನ್ನು ವಜಾಗೊಳಿಸಲಾಯಿತು’’ ಎಂದು ಬುಲಂದ್ಶಹರ್ನ ಪ್ರಧಾನ ಮಂತ್ರಿ ಜನಕಲ್ಯಾಣಕಾರಿ ಯೋಜನ ಜಾಗೃತ ಅಭಿಯಾನದ ಜಿಲ್ಲಾಧ್ಯಕ್ಷ ಪ್ರಿಯತಮ್ ಕುಮಾರ್ ಪ್ರೇಮ್ ಅವರು ಹೇಳಿದ್ದಾರೆ. ಬಿಜೆಪಿಯ ಬುಲಂದ್ಶಹರ್ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಸಿಸೋಡಿಯಾ ಕೂಡ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ, ಬಿಜೆಪಿಯೊಂದಿಗೆ ಪಿಎಂಜೆವೈಜೆಎಗೆ ಯಾವುದೇ ಸಂಬಂಧ ಇಲ್ಲ ಎಂದು ಪ್ರೇಮ್ ಹೇಳಿದ್ದಾರೆ. 

ಶಿಖರ್ ಅಗರ್ವಾಲ್ ನನ್ನು ನಿಯೋಜಿಸಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಬಿಜೆಪಿಯ ಇತರ ನಾಯಕರು ಕೂಡ ಶಿಖರ್ ಅವರ್ವಾಲ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಬಿಜೆಪಿಯ ಬುಲಂದ್ಶಹರ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜಯ್ ಗುರ್ಜರ್ ಅವರು ಅಧ್ಯಕ್ಷ ಅನಿಲ್ ಸಿಸೋಡಿಯಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಪಿಎಂಜೆವೈಜೆಎ ಸರಕಾರೇತರ ಸಂಸ್ಥೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅನಿಲ್ ಸಿಸೋಡಿಯಾ ಹಾಗೂ ಬಿಜೆಪಿ ಇದರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರ ಪ್ರತಿಪಾದನೆಯನ್ನು ಪಿಎಂಜೆವೈಜೆಎಯ ಸಲಹಾ ಸಮಿತಿಯಲ್ಲಿರುವ ಸದಸ್ಯರ ಹೆಸರು ಹುಸಿಗೊಳಿಸಿದೆ. ಸಮಿತಿ ಶ್ಯಾಮ್ ಜಾಜು, ರಮೇಶ್ ಪೋಖ್ರಿಯಾಲ್, ನಿಶಾಂಕ್, ನರೇಂದ್ರ ಥೋಮರ್, ಗಿರಿರಾಜ್ ಸಿಂಗ್, ಧರ್ಮೇಂದ್ರ ಪ್ರಧಾನ್ರಂತಹ ಸಚಿವರು ಹಾಗೂ ಬಿಜೆಪಿಯ ಹಿರಿಯ ನಾಯಕರನ್ನು ಸದಸ್ಯರನ್ನಾಗಿ ಒಳಗೊಂಡಿರುವುದು ಬಿಜೆಪಿ ಪ್ರತಿಪಾದನೆ ಸುಳ್ಳು ಎನ್ನುವುದಕ್ಕೆ ಸಾಕ್ಷಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News