×
Ad

ರಾಜಸ್ತಾನ: ಶಾಲಾ ಪಠ್ಯದಲ್ಲಿದ್ದ ‘ಬ್ರಿಟಿಷರ ಮಿತ್ರ ಸಿಂದಿಯಾ’ ಎಂಬ ಸಾಲನ್ನು ತೆಗೆದು ಹಾಕಿದ್ದ ಬಿಜೆಪಿ ಸರಕಾರ

Update: 2020-07-21 22:18 IST

ಜೈಪುರ, ಜು.20: ರಾಜಸ್ತಾನದ ಪ್ರೌಢಶಿಕ್ಷಣ ಮಂಡಳಿ 10ನೇ ತರಗತಿಗೆ ನಿಗದಿಗೊಳಿಸಿರುವ ಪಠ್ಯಪುಸ್ತಕದಲ್ಲಿದ್ದ ಝಾನ್ಸಿ ಕೀ ರಾಣಿ ಎಂಬ ಪದ್ಯದಲ್ಲಿದ್ದ ‘ಬ್ರಿಟಿಷರ ಮಿತ್ರ ಸಿಂದಿಯಾ’ ಎಂಬ ಸಾಲನ್ನು ಈ ಹಿಂದಿನ ಬಿಜೆಪಿ ಸರಕಾರ ತೆಗೆದು ಹಾಕಿತ್ತು. ಬಿಜೆಪಿ ಸರಕಾರ ಪರಿಷ್ಕರಿಸಿದ್ದ ಪಠ್ಯಕ್ರಮಗಳನ್ನು ಪೂರ್ವಸ್ಥಿತಿಗೇ ತರಲು ಕ್ರಮ ಕೈಗೊಂಡಿದ್ದ ಈಗಿನ ಕಾಂಗ್ರೆಸ್ ಸರಕಾರ , ಕವನದಿಂದ ಕೈಬಿಟ್ಟ ಸಾಲುಗಳನ್ನು ಮತ್ತೆ ಸೇರಿಸಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ವೈರ್’ ವರದಿ ಮಾಡಿದೆ.

‘ಝಾನ್ಸಿ ಕೀ ರಾಣಿ ’ ಸುಭದ್ರಾ ಕುಮಾರಿ ಚೌಹಾಣ್ ಎಂಬವರ ಪ್ರಸಿದ್ಧ ಕವನವಾಗಿದ್ದು ಬ್ರಿಟಿಷರ ವಿರುದ್ಧ ಹೋರಾಡಿದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಸಾಹಸಗಾಥೆಯನ್ನು ಹೇಳುತ್ತದೆ. ಇದೇ ಸಂದರ್ಭದಲ್ಲಿ ಗ್ವಾಲಿಯರ್ ಪ್ರಾಂತ್ಯವನ್ನು ಸಿಂದಿಯಾ ವಂಶದ ಜಯಾಜಿ ರಾವ್ ಸಿಂದಿಯಾ ಆಳುತ್ತಿದ್ದರು. (ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂದಿಯಾ ಈ ವಂಶದವರಾಗಿದ್ದಾರೆ).

ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ ಲಕ್ಷ್ಮೀಬಾಯಿ ಕಡೆಗೂ ಹಿಮ್ಮೆಟ್ಟಬೇಕಾಯಿತು. ತಮ್ಮನ್ನು ಬೆನ್ನಟ್ಟಿ ಬಂದಿದ್ದ ಬ್ರಿಟಿಷ್ ಪಡೆಯಿಂದ ತಪ್ಪಿಸಿಕೊಳ್ಳಲು ಜಯಾಜಿ ರಾವ್ ಸಿಂದಿಯಾರಿಂದ ನೆರವು ಬೇಡಿದಾಗ ಅವರು ನಿತ್ರಾಣವಾಗಿದ್ದ ಕುದುರೆಯೊಂದನ್ನು ನೀಡಿದ್ದರು. ಇದೇ ಕಾರಣದಿಂದ ಲಕ್ಷ್ಮೀಬಾಯಿ ಬ್ರಿಟಿಷರಿಗೆ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆಯನ್ನು ನೆನಪಿಸುವ ಸಾಲನ್ನು ಪದ್ಯದಿಂದ ತೆಗೆದು ಹಾಕುವಂತೆ 2013ರಿಂದ 2018ರವರೆಗೆ ರಾಜಸ್ತಾನದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದ ನೇತೃತ್ವ ವಹಿಸಿದ್ದ ವಸುಂಧರಾ ರಾಜೆ , ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಶಿಫಾರಸಿನ ಹಿನ್ನೆಲೆಯಲ್ಲಿ ಈ ಸಾಲುಗಳನ್ನು ಕೈಬಿಡಲು ಆದೇಶಿಸಿದ್ದರು ಎಂದು ಮೂಲಗಳು ಹೇಳಿವೆ.

2018ರಲ್ಲಿ ಕಾಂಗ್ರೆಸ್ ಸರಕಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವಂತೆ ಪಠ್ಯಕ್ರಮ ಸಮಿತಿಗೆ ಸೂಚಿಸಿದರೂ, ಝಾನ್ಸಿ ರಾಣಿಯ ಪದ್ಯದಿಂದ ಕೈಬಿಟ್ಟಿರುವ ಸಾಲುಗಳನ್ನು ಮತ್ತೆ ಸೇರಿಸಲು ಸಮಿತಿ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ‘ದಿ ವೈರ್’ಗೆ ಪ್ರತಿಕ್ರಿಯಿಸಿರುವ ಪಠ್ಯಕ್ರಮ ಸಮಿತಿಯ ಮಾಜಿ ಸಂಯೋಜಕ ಕೆಎಸ್ ಗುಪ್ತಾ, ವಸುಂಧರಾ ರಾಜೆ ಸಿಂದಿಯಾ ಕುಟುಂಬದವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ತಮ್ಮ ವಂಶವನ್ನು ಟೀಕಿಸುವ ಸಾಲುಗಳನ್ನು ತೆಗೆದುಹಾಕುವಂತೆ ಅವರೇ ಆದೇಶಿಸಿದ್ದಾರೆ ಎಂದಿದ್ದಾರೆ.

ಆದರೆ ವಸುಂದರಾ ರಾಜೆಯ ಅವಧಿಯಲ್ಲಿ ನೇಮಕವಾಗಿದ್ದ ಪಠ್ಯಕ್ರಮ ಸಮಿತಿ ಈ ಹೇಳಿಕೆಯನ್ನು ನಿರಾಕರಿಸಿದೆ. ಪಠ್ಯಕ್ರಮವನ್ನು ರೂಪಿಸುವುದು ಮಾತ್ರ ನಮ್ಮ ಕೆಲಸ. ಯಾವ ಪಠ್ಯವನ್ನು ಸ್ವೀಕರಿಸಬೇಕು ಎಂಬುದು ಪಠ್ಯಪುಸ್ತಕ ತಯಾರಿಕೆ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಸಮಿತಿಯ ಮಾಜಿ ಸಂಯೋಜಕ ಆಶಿಷ್ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.

ಆರೆಸ್ಸೆಸ್ ಮುಖಂಡರ ವೈಭವೀಕರಣ

ಈ ಮಧ್ಯೆ, 2018ರ ಡಿಸೆಂಬರ್‌ನಲ್ಲಿ ರಾಜಸ್ತಾನದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಪಠ್ಯಪುಸ್ತಕಗಳನ್ನು ಪರಿಷ್ಕರಿಸುವಂತೆ ಪಠ್ಯಕ್ರಮ ಸಮಿತಿಗೆ ಸೂಚಿಸಿತ್ತು. ಈ ಹಿಂದಿನ ಬಿಜೆಪಿ ಸರಕಾರ ಸಂಘಪರಿವಾರದ ನೆಚ್ಚಿನ ಮುಖಂಡರಾದ ಸಾವರ್ಕರ್ ಮತ್ತು ದೀನದಯಾಳ್ ಉಪಾಧ್ಯಾಯರನ್ನು ಶಾಲಾ ಪಠ್ಯಕ್ರಮದಲ್ಲಿ ವೈಭವೀಕರಿಸಿರುವುದನ್ನು ಸಮಿತಿ ಆಕ್ಷೇಪಿಸಿತು ಮತ್ತು ಸಾವರ್ಕರ್ ಕುರಿತ ಪಠ್ಯದಲ್ಲಿ ಸಾವರ್ಕರ್ ಕ್ಷಮಾದಾನ ಕೋರಿ ಬ್ರಿಟಿಷರಿಗೆ ಬರೆದಿರುವ ಪತ್ರವನ್ನೂ ಉಲ್ಲೇಖಿಸುವಂತೆ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News