ಕೊರೋನ ಸೋಂಕು ಉಲ್ಬಣ: ತಿರುಪತಿ ದೇವಸ್ಥಾನ ಮುಚ್ಚಲು ಆಗ್ರಹ
ಹೈದರಾಬಾದ್, ಜು.21: ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅರ್ಚಕರು ಕೊರೋನ ಸೋಂಕಿನಿಂದ ಮೃತರಾದ ಹಾಗೂ ದೇವಸ್ಥಾನದ ಹಲವು ಉದ್ಯೋಗಿಗಳಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಹಲವರು ಆಗ್ರಹಿಸಿದ್ದಾರೆ. 4.5 ಲಕ್ಷ ಜನಸಂಖ್ಯೆಯಿರುವ ತಿರುಪತಿ ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ 2,000ವನ್ನು ಮೀರಿದೆ. ಚಿತ್ತೂರು ಜಿಲ್ಲೆಯಲ್ಲಿ 4,673 ಪ್ರಕರಣ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ನಗರದಲ್ಲಿ ಜುಲೈ 20ರಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ ತಿರುಪತಿ ದೇವಸ್ಥಾನಕ್ಕೆ ಆಗಮಿಸುವವರಿಗೆ ಲಾಕ್‌ಡೌನ್‌ನಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಆಡಳಿತ ಮಂಡಳಿಯ ಹೇಳಿಕೆಯನ್ನು ಸ್ಥಳೀಯರು ವಿರೋಧಿಸಿದ್ದಾರೆ. ತಿರುಪತಿ ದೇವಸ್ಥಾನಕ್ಕೆ ಪ್ರವೇಶಾವಕಾಶ ಒದಗಿಸಿರುವುದು ನಗರದಲ್ಲಿ ಕೊರೋನ ಸೋಂಕು ಏಕಾಏಕಿ ಉಲ್ಬಣಗೊಳ್ಳಲು ಕಾರಣ ಎಂದು ಕಳೆದ ವಾರ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ವರದಿ ಸಲ್ಲಿಸಿರುವುದನ್ನು ಸ್ಥಳೀಯರು ಉಲ್ಲೇಖಿಸಿದ್ದಾರೆ.