2018ರ ಏಶ್ಯನ್ ಗೇಮ್ಸ್: ಬೆಳ್ಳಿ ಗೆದ್ದಿದ್ದ ಭಾರತಕ್ಕೆ ಈಗ ಚಿನ್ನದ ಪದಕ

Update: 2020-07-23 16:35 GMT

ಹೊಸದಿಲ್ಲಿ, ಜು.23: ಜಕಾರ್ತದಲ್ಲಿ 2018ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ‌ನಲ್ಲಿ ಮೊದಲ ಸ್ಥಾನ ಪಡೆದಿದ್ದ ಬಹರೈನ್ ತಂಡ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಭಾರತದ 4X400 ಮೀ. ರಿಲೇ ಮಿಕ್ಸೆಡ್ ತಂಡಕ್ಕೆ ಈಗ ಚಿನ್ನದ ಪದಕದ ಸ್ಥಾನಮಾನ ಲಭಿಸಿದೆ.

ಮುಹಮ್ಮದ್ ಅನಸ್, ಎಂ.ಆರ್. ಪೂವಮ್ಮ, ಹಿಮಾ ದಾಸ್ ಹಾಗೂ ಅರೋಕಿಯಾ ರಾಜೀವ್ ಅವರನ್ನೊಳಗೊಂಡ ಭಾರತದ ಅಥ್ಲೀಟ್ ‌ಗಳ ತಂಡ 3:15.71 ಸೆಕೆಂಡ್‌ನಲ್ಲಿ ಗುರಿ ತಲುಪಿ ಬಹರೈನ್ ಬಳಿಕ ಎರಡನೇ ಸ್ಥಾನ ಪಡೆದಿತ್ತು. ಆದರೆ, ಪ್ರಶಸ್ತಿ ವಿಜೇತ ಬಹರೈನ್ ತಂಡದ ಸದಸ್ಯೆ ಕೆಮಿ ಅಡೆಕೊಯಾ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ.

ಅಲಿ ಖಾಮಿಸ್, ಕೆಮಿ ಅಡೆಕೋಯಾ, ಸಲ್ವಾ ನಾಸರ್ ಹಾಗೂ ಅಬ್ಬಾಸ್ ಅಬೂಬಕರ್ ಅಬ್ಬಾಸ್ ಅವರಿದ್ದ ಬಹರೈನ್ ಮಿಕ್ಸೆಡ್ ರಿಲೇ ತಂಡ 3:11.89 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿತ್ತು. ಇದೀಗ ಬಹರೈನ್ ತಂಡದ ಸದಸ್ಯೆಯೊಬ್ಬರು ಡೋಪಿಂಗ್ ಪರೀಕ್ಷೆಯಲ್ಲಿ ಫೇಲಾದ ಕಾರಣ ಕಝಖ್‌ ಸ್ತಾನ ಬೆಳ್ಳಿ ಪದಕ ಗಿಟ್ಟಿಸಲು ಸಜ್ಜಾಗಿದ್ದರೆ, ನಾಲ್ಕನೇ ಸ್ಥಾನದಲ್ಲಿದ್ದ ಚೀನಾ ಮೂರನೇ ಸ್ಥಾನಕ್ಕೇರಿದೆ.

ಬಹರೈನ್ ‌ನ ಕೆಮಿ ಅಡೆಕೊಯಾ ಡೋಪಿಂಗ್ ಟೆಸ್ಟ್‌ ನಲ್ಲಿ ಅನುತ್ತೀರ್ಣರಾದ ಕಾರಣ ಫಲಿತಾಂಶದಲ್ಲಿ ಬದಲಾವಣೆ ಮಾಡಲಾಗಿದೆ. ಕೆಮಿ ಅವರಿಗೆ ಅಥ್ಲೆಟಿಕ್ಸ್ ಸಮಗ್ರತೆ ಘಟಕ(ಎಐಯು)ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಿದೆ. 2016ರ ವಿಶ್ವ ಒಳಾಂಗಣ ಕ್ರೀಡಾಕೂಟದಲ್ಲಿ 400 ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದ ಕೆಮಿ ನಿಷೇಧಿತ ಸ್ಟೀರಾಯ್ಡ್ ಸ್ಟಾನೊರೊಲೊಲ್ ಸೇವಿಸಿರುವುದು ಪತ್ತೆಯಾಗಿದೆ.

ಕೆಮಿ ಅವರು 2018ರ ಆಗಸ್ಟ್ 24ರಿಂದ 2018ರ ನವೆಂಬರ್ 26 ರ ತನಕ ಸ್ವೀಕರಿಸಿರುವ ಎಲ್ಲ ಫಲಿತಾಂಶವನ್ನು ಅನರ್ಹಗೊಳಿಸಲಾಗಿದೆ ಎಂದು ಎಐಯು ತಿಳಿಸಿದೆ.

2018ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ರೇಸ್‌ ನಲ್ಲಿ ಅನಸ್ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಪೂವಮ್ಮ ಲ್ಯಾಪ್‌ ನಲ್ಲಿ ಹಿಂದೆ ಬಿದ್ದಿದ್ದರು. ಹಿಮಾ ಮುನ್ನಡೆ ಒದಗಿಸಲು ಯತ್ನಿಸಿದ್ದರು. ಅರೋಕಿಯಾ ಭಾರತವು 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಲು ಶ್ರಮಿಸಿದ್ದರು. ರೇಸ್‌ ನ ಬಳಿಕ ಭಾರತವು ಬಹರೈನ್ ತಂಡದ ವಿರುದ್ಧ ತನ್ನ ಓಟಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಿತ್ತು. ಆದರೆ, ಭಾರತದ ದೂರನ್ನು ತಾಂತ್ರಿಕ ಸಮಿತಿಯು ತಳ್ಳಿ ಹಾಕಿತ್ತು. ಅಡೆಕೊಯಾ ಅವರು ಹಿಮಾ ಓಟಕ್ಕೆ ಅಡ್ಡಿಪಡಿಸಿದ್ದರು.

ಕೆಮಿ ನಿಷೇಧ ಶಿಕ್ಷೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಏಶ್ಯನ್ ಗೇಮ್ಸ್‌ ನಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ಅವರು ಗೆದ್ದುಕೊಂಡಿದ್ದ ಪ್ರಶಸ್ತಿಯು ವಿಯೆಟ್ನಾಂನ ಖ್ವಾಚ್ ಥಿ ಲ್ಯಾನ್ ಪಾಲಾಗಿದೆ . ಬಹರೈನ್‌ನ ಆಮಿನತ್ ಯೂಸುಫ್ ಜಮಾಲ್ ಎರಡನೇ ಸ್ಥಾನಕ್ಕೇರಿದರೆ, ಭಾರತದ ಅನು ರಾಘವನ್ ಕಂಚಿನ ಪದಕ ಪಡೆಯಲಿದ್ದಾರೆ.

 ಅನುಗೆ ಕಂಚು: ಮಹಿಳೆಯರ 400 ಮೀ.ಹರ್ಡಲ್ಸ್‌ ನಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತದ ಅನು ರಾಘವನ್ ಮೂರನೇ ಸ್ಥಾನಕ್ಕೇರಿ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ. ಅನು ಫೈನಲ್ ‌ನಲ್ಲಿ 56.77 ಸೆಕೆಂಡ್‌ನಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆದಿದ್ದರು. ಸಹ ಅಥ್ಲೀಟ್ ಜೌನಾ ಮುರ್ಮು(57.48 ಸೆ.)5ನೇ ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News