ರಾಮಮಂದಿರ ಶಂಕುಸ್ಥಾಪನೆಗೆ ಇದು ಶುಭಕಾಲವಲ್ಲ: ಸ್ವರೂಪಾನಂದ ಸರಸ್ವತಿ

Update: 2020-07-23 16:44 GMT

ಹೊಸದಿಲ್ಲಿ, ಜು.23: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಇದು ಶುಭಕಾಲವಲ್ಲ ಎಂದು ಜ್ಯೋತಿಷ್ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ರಾಮಮಂದಿರ ಟ್ರಸ್ಟ್‌ ನಲ್ಲಿ ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ದೇವಸ್ಥಾನ ನಿರ್ಮಾಣ ಉತ್ತಮ ರೀತಿಯಲ್ಲಿ ನಡೆಯಬೇಕು ಮತ್ತು ಸರಿಯಾದ ಸಮಯದಲ್ಲಿ ಶಂಕುಸ್ಥಾಪನೆ ಕಾರ್ಯ ನಡೆಯಬೇಕು. ಆದರೆ ಇದು ಅಶುಭಘಳಿಗೆ ಎಂದು ಸ್ವರೂಪಾನಂದ ಸರಸ್ವತಿ ಅಸಮಾಧಾನ ಸೂಚಿಸಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಆಗಸ್ಟ್ 5ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮವಿದೆ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬಗ್ಗೆ ಕಳೆದ ಫೆಬ್ರವರಿಯಲ್ಲಿ ತಮ್ಮ ಅಸಮಾಧಾನ ಹೊರಗೆಡವಿದ್ದ ಸ್ವರೂಪಾನಂದ ಸರಸ್ವತಿ, ಶಂಕರಾಚಾರ್ಯರಾಗಿರುವ ತಮ್ಮನ್ನು ಟ್ರಸ್ಟ್‌ನ ಮುಖ್ಯಸ್ಥನಾಗಿ ನೇಮಿಸಬೇಕಿತ್ತು ಎಂದು ಹೇಳಿದ್ದರು. ಟ್ರಸ್ಟ್‌ನಲ್ಲಿ ಶಂಕರಾಚಾರ್ಯರ ಸ್ಥಾನವನ್ನು ಸ್ವಾಮಿ ವಸುದೇವಾನಂದ ಸರಸ್ವತಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News