ಐಪಿಎಲ್‌ನಲ್ಲಿ ಭಾರತೀಯ ಕೋಚ್‌ಗಳಿಗೆ ಆದ್ಯತೆ ನೀಡಬೇಕು: ಮುಹಮ್ಮದ್ ಅಝರುದ್ದೀನ್

Update: 2020-07-24 05:26 GMT

ಮುಂಬೈ: ಐಪಿಎಲ್ ಫ್ರಾಂಚೈಸಿಗಳು ತಮ್ಮ ಸಹಾಯಕ ಸಿಬ್ಬಂದಿ ವಿಭಾಗದಲ್ಲಿ ವಿದೇಶಿಗರಿಗಿಂತ ಹೆಚ್ಚು ಭಾರತೀಯ ಕೋಚ್‌ಗಳಿಗೆ ಆದ್ಯತೆ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಆಗ್ರಹಿಸಿದರು.

‘‘ಐಪಿಎಲ್ ತಂಡಗಳು ತಮ್ಮ ತಂಡಗಳಿಗೆ ತರಬೇತಿ ನೀಡಲು ಅನುಭವ ಹೊಂದಿರುವ ಭಾರತದ ಮಾಜಿ ಆಟಗಾರರಿಗೆ ಅವಕಾಶ ಕಲ್ಪಿಸಬೇಕು. ಅಷ್ಟಕ್ಕೂ ಇದು ಇಂಡಿಯನ್ ಪ್ರೀಮಿಯರ್ ಲೀಗ್, ಇದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಕೋಚ್‌ಗಳಿಗೆ ಅವಕಾಶ ನೀಡಬೇಕು. ನಮ್ಮ ಕೋಚ್‌ಗಳಿಗೆ ಬಿಗ್ ಬ್ಯಾಶ್ ಟ್ವೆಂಟಿ-20ಯಲ್ಲಾಗಲಿ, ಆಸ್ಟ್ರೇಲಿಯ ಅಥವಾ ಇಂಗ್ಲೆಂಡ್ ಕ್ರಿಕೆಟ್ ತಂಡಗಳಲ್ಲಿ ಕೋಚ್ ಆಗುವ ಅವಕಾಶ ಸಿಗುವುದಿಲ್ಲ. ಯಾರನ್ನಾದರೂ ಆಯ್ಕೆ ಮಾಡುವುದು ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ. ಆದರೆ, ನಮ್ಮಲ್ಲಿ ಸಾಕಷ್ಟು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿರುವ ಮಾಜಿ ಕ್ರಿಕೆಟಿಗರಿದ್ದಾರೆಂದು ನೆನಪಿಟ್ಟುಕೊಳ್ಳಬೇಕಾಗಿದೆ. ಅವರು ಐಪಿಎಲ್‌ನಲ್ಲಿ ಅವಕಾಶ, ಪ್ರೋತ್ಸಾಹ ಹಾಗೂ ಆರ್ಥಿಕ ಲಾಭ ಪಡೆಯಲು ಅರ್ಹರಿದ್ದಾರೆ’’ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ(ಎಚ್‌ಸಿಎ)ಹಾಲಿ ಮುಖ್ಯಸ್ಥ ಅಝರುದ್ದೀನ್ ಅಭಿಪ್ರಾಯಪಟ್ಟರು.

‘‘ಎಲ್ಲ ಮಾಜಿ ಕ್ರಿಕೆಟಿಗರಿಗೆ ಕ್ರಿಕೆಟ್ ಮಂಡಳಿಯು ಆರ್ಥಿಕ ಸಹಾಯ ಮಾಡುತ್ತಿದೆ ಎಂಬ ವಿಚಾರವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ವಿದೇಶಿಗರು ಐಪಿಎಲ್‌ನಲ್ಲಿ ಕೋಚಿಂಗ್ ನೀಡಿ ಕೋಟಿಗಟ್ಟಲೆ ಹಣ ಸಂಪಾದಿಸಬಹುದಾದರೆ, ಅದೇ ರೀತಿ ನಮ್ಮ ಆಟಗಾರರಿಗೂ ಯಾಕೆ ಅವಕಾಶ ನೀಡಬಾರದು? ಕಳೆದ ವರ್ಷ ನಡೆದಿದ್ದ ಬಿಸಿಸಿಐ ವಾರ್ಷಿಕ ಮಹಾಸಭೆ(ಎಜಿಎಂ)ಯಲ್ಲಿ ಈ ವಿಚಾರವನ್ನು ನಾನು ಪ್ರಸ್ತಾವಿಸಿದ್ದೆ’’ ಎಂದು ಖಾಸಗಿ ಟಿವಿ ಚಾನಲ್‌ವೊಂದಕ್ಕೆ ಅಝರ್ ತಿಳಿಸಿದರು. ಭಾರತದ ಪರ 99 ಟೆಸ್ಟ್ ಹಾಗೂ 334 ಏಕದಿನ ಪಂದ್ಯಗಳಲ್ಲಿ ಆಡಿರುವ ಅಝರುದ್ದೀನ್ ಐಪಿಎಲ್ ಟೂರ್ನಿ ಆರಂಭವಾದ ಬಳಿಕ ಹೆಚ್ಚಿನ ಪ್ರಮುಖ ಆಟಗಾರರು ದೇಶೀಯ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘‘ಉದ್ದೇಶಪೂರ್ವಕವಾಗಿ ದೇಶೀಯ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿರುವ ಆಟಗಾರರ ವಿರುದ್ಧ ಕ್ರಿಕೆಟ್ ಮಂಡಳಿಯು ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಭಾರತದ ಆಟಗಾರರು ದೇಶೀಯ ಕ್ರಿಕೆಟ್ ತಂಡದಲ್ಲಿ ಆಡಿದರೆ ಯುವ ಆಟಗಾರರು ಅವರಿಂದ ಸಾಕಷ್ಟು ಪಾಠ ಕಲಿಯುತ್ತಾರೆ. ಐಪಿಎಲ್ ವಿಶ್ವ ಕ್ರಿಕೆಟ್‌ನ ಪ್ರಮುಖ ಟೂರ್ನಿ ಎಂದು ನಾನು ಒಪ್ಪಿಕೊಳ್ಳುವೆ. ಕ್ರಿಕೆಟ್ ಮಂಡಳಿ ಹಾಗೂ ಆಟಗಾರರು ಇದರಿಂದ ಲಾಭ ಪಡೆಯುತ್ತಿದ್ದಾರೆ. ಆದರೆ, ದೇಶೀಯ ಕ್ರಿಕೆಟ್‌ನಲ್ಲಿ ಆಡುವುದು ಅತ್ಯಂತ ಅಗತ್ಯ’’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News