ನೇಪಾಳ ಸೇನಾ ಪೊಲೀಸರಿಂದ ಭಾರತೀಯ ಗ್ರಾಮಸ್ಥರಿಗೆ ಥಳಿತ: ಭಾರತ-ನೇಪಾಳ ಗಡಿ ಗ್ರಾಮ ಉದ್ವಿಗ್ನ
ಬೆತಿಯಾ, ಜು. 26: ನೇಪಾಳ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಮಹಿಳೆ ಸೇರಿದಂತೆ ಭಾರತದ ಇಬ್ಬರು ಗ್ರಾಮಸ್ಥರಿಗೆ ಥಳಿಸಿದ ಬಳಿಕ ಭಾರತ-ಚೀನಾ ಗಡಿಯ ರೆರೋಖಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾರ್ಸ್ವಾಲ್ ಗ್ರಾಮದಲ್ಲಿ ಶನಿವಾರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಮಹಿಳೆಯೋರ್ವರು ತನ್ನ ಊರಿನ ನಿವಾಸಿಗಳಾದ ಮಂಜು ದೇವಿ ಹಾಗೂ ಕುಂದನ್ ಕುಮಾರ್ ಅವರೊಂದಿಗೆ ನೇಪಾಳ ಗಡಿಯ ನಾಲ್ಕು ಮೀಟರ್ ಒಳಗೆ ಪ್ರವೇಶಿಸಿದ್ದರು. ಇದರಿಂದ ಆಕ್ರೋಶಿತರಾದ ನೇಪಾಳ ಯೋಧರು ಅನಂತರ ಪೂರ್ವ ಚಂಪಾರಣ್‌ನ ಘೋಡಾಸಹನ್ ಬ್ಲಾಕ್‌ನ ಝರೋಖಾರ್ ವ್ಯಾಪ್ತಿಯ ಖರ್ಸ್ವಾಲ ಗ್ರಾಮದ ನಿವಾಸಿಗಳಾದ ಸೀಮಾ ದೇವಿ ಹಾಗೂ ಅವರ ಪತಿ ರವೀಂದ್ರ ಪ್ರಸಾದ್‌ಗೆ ಥಳಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಎಪಿಎಫ್ ಮಹಿಳೆಯರೊಂದಿಗೆ ದುರ್ನಡತೆ ತೋರಿದ ಹಾಗೂ ಥಳಿಸಿದ ಬಳಿಕ ಇಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಘೋಡಾಸಹನ್‌ನ ನಿವಾಸಿ ಹಾಗೂ ಜೆಡಿಯುನ ರಾಜ್ಯ ಮಂಡಳಿ ಸದಸ್ಯ ರಾಮ್ ಪುಕಾರ್ ಸಿನ್ಹಾ ತಿಳಿಸಿದ್ದಾರೆ. ಎಪಿಎಪ್ ಸೀಮಾ ದೇವಿಗೆ ಥಳಿಸಿದಾಗ ಅವರನ್ನು ರಕ್ಷಿಸಲು ಪತಿ ರವೀಂದ್ರ ಪ್ರಸಾದ್ ಧಾವಿಸಿ ಬಂದರು. ಆದರೆ, ಎಪಿಎಫ್ ಅವರನ್ನು ವಶಕ್ಕೆ ತೆಗೆದುಕೊಂಡಿತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
‘‘ಪತ್ನಿಗೆ ಹಲ್ಲೆ ನಡೆಸುವುದನ್ನು ನಾನು ವಿರೋಧಿಸಿದ ಸಂದರ್ಭ ಅವರು ನನಗೆ ಕೂಡ ಥಳಿಸಿದರು. ಅನಂತರ ಹೊರಠಾಣೆಗೆ ಕರೆದೊಯ್ದರು. ಬಳಿಕ ನನ್ನ ಪತ್ನಿಯನ್ನು ಬಿಡುಗಡೆಗೊಳಿಸಿದರು’’ ಎಂದು ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.