ಫ್ರೆಂಚ್ ಬಿರಿಯಾನಿ: ಬಿರಿಯಾನಿ ರುಚಿ ನೋಡಿದರೆ ತಪ್ಪೇನಿಲ್ಲ..!

Update: 2020-07-25 19:30 GMT

ಕನ್ನಡದಲ್ಲಿ ಕೂಡ ಇತ್ತೀಚೆಗೆ ಹೊಸ ಮಾದರಿಯ ಸಿನೆಮಾ ಪ್ರಯೋಗಗಳು ನಡೆಯುತ್ತಿವೆ. ತಥಾಕಥಿತ ನಾಯಕ, ನಾಯಕಿಯರ ಪ್ರೇಮಾನುರಾಗಗಳಿಂದ ಹೊರತಾದ ಚಿತ್ರ ಇದು. ಹಾಗೆ ನೋಡಿದರೆ ಇದು ಪ್ರೇಮ ಕತೆಯೇ ಅಲ್ಲ. ಇಲ್ಲಿ ನಾಯಕನೂ ಇಲ್ಲ. ಒಂದು ವ್ಯವಹಾರದ ನಡುವೆ ನಡೆಯುವ ಹೆಸರಿನ ಗೊಂದಲ ಮತ್ತು ಗಳಿಸುವ ಹಂಬಲ ಸೇರಿ ತಯಾರಾಗಿದೆ ಈ ಬಿರಿಯಾನಿ ಮಸಾಲ.

ಚಿತ್ರದ ಆರಂಭದಲ್ಲೇ ಒಬ್ಬ ಶಯ್ಯವಸ್ಥೆಯಲ್ಲಿರುವ ಮುದುಕ ಡಾನ್‌ನನ್ನು ತೋರಿಸಲಾಗುತ್ತದೆ. ಆತನ ಹೆಸರು ಚಾರ್ಲ್ಸ್. ಸಾಯುವ ಮೊದಲು ಚಾರ್ಲ್ಸ್ ತನ್ನ ಮಗನಿಗೆ ಒಂದು ವಿಚಾರ ಹೇಳುತ್ತಾನೆ. ‘‘ಸೊಲಮನ್ ಸಾಮಾನು ತರ್ತಾನೆ, ಅದನ್ನು ಸುಲೈಮಾನ್ ಮೂಲಕ ಪಡೆ’’ ಎಂದು ತಿಳಿಸುತ್ತಾನೆ. ಆದರೆ ಚಾರ್ಲ್ಸ್‌ನ ಮಗನೋರ್ವ ಹೆಡ್ಡ. ಆತ ಸಾಮಾನು ತರುವ ವ್ಯಕ್ತಿಯ ಹೆಸರನ್ನು ಮರೆತು ಬಿಡುತ್ತಾನೆ. ಮಾತ್ರವಲ್ಲ, ಆ ಹೆಸರನ್ನು ಮತ್ತೊಮ್ಮೆ ಸ್ಪಷ್ಟಪಡಿಸಬೇಕಾದ ಚಾರ್ಲ್ಸ್ ಮಲಗಿದಲ್ಲೇ ಪ್ರಾಣ ಬಿಟ್ಟಿರುತ್ತಾನೆ. ಹಾಗಾಗಿ ಸುಲೈಮಾನ್ ವಿಮಾನ ನಿಲ್ದಾಣದಲ್ಲಿ ಸೈಮನ್ ಎನ್ನುವ ಫ್ರೆಂಚ್ ವ್ಯಕ್ತಿಯ ಬೆನ್ನು ಬೀಳುತ್ತಾನೆ. ಸೈಮನ್ ಅಲ್ಲಿಂದ ಹೇಗೆ ಶಿವಾಜಿನಗರದ ಆಟೋ ರಿಕ್ಷಾಚಾಲಕ ಅಸ್ಗರ್ ಜತೆ ಸೇರುತ್ತಾನೆ? ಅಸ್ಗರ್‌ನ ಸಮಸ್ಯೆಗಳೇನು? ನಿಜಕ್ಕೂ ಚಾರ್ಲ್ಸ್ ಹೇಳಿದ ವ್ಯಕ್ತಿ ಸೈಮನ್ ಹೌದಾ? ಮೊದಲಾದ ಪ್ರಶ್ನೆಗಳಿಗೆ ಸಿನೆಮಾ ಉತ್ತರ ನೀಡುತ್ತದೆ.

ಒಂದೆಳೆಯ ಕತೆ ಹೇಳಿದಾಗಲೇ ಇದರಲ್ಲಿ ವಿಶೇಷ ಏನೂ ಇಲ್ಲ ಅನಿಸಿರಬಹುದು. ಇದು ಬೆಂಗಳೂರಿನಲ್ಲಿ ನಡೆಯುವ ಘಟನೆಯನ್ನು ಆಧರಿಸಿ ಮಾಡಿದ ಚಿತ್ರ. ಯಾವ ಘಟನೆ ಕೂಡ ವಾಸ್ತವದಲ್ಲಿ ನಡೆಯಲಾಗದು ಎಂದು ತಳ್ಳಿ ಹಾಕುವಂತಿಲ್ಲ. ಆದರೆ ಅಂತಹದೊಂದು ಘಟನೆ ನಡೆದರೂ ಅದನ್ನು ಕ್ಯಾರಿಕೇಚರ್ ಮಾದರಿಯ ಪಾತ್ರಗಳಲ್ಲಿ ತೋರಿಸಿದ್ದಾರೆ ನಿರ್ದೇಶಕರು. ಹಾಗಾಗಿ ಟಿಪಿಕಲ್ ಬೆಂಗಳೂರು ಶೈಲಿಯ ಮಿಶ್ರಭಾಷೆಯ ಪಾತ್ರಗಳು ಇಲ್ಲಿ ಸಾಲು ಸಾಲಾಗಿ ದೊರಕುತ್ತವೆ. ನಾಯಕ ಪ್ರಾಧಾನ್ಯತೆ ಹೊಂದಿದ ಪಾತ್ರವಾಗಿ ಡ್ಯಾನಿಶ್ ಸೇಠ್ ನಿರ್ವಹಿಸಿರುವ ಅಸ್ಗರ್ ಪಾತ್ರ ನಿಜಕ್ಕೂ ಮನ ಸೆಳೆಯುತ್ತದೆ. ತನ್ನ ಕಾರ್ಯಕ್ರಮ ಮತ್ತು ಈ ಹಿಂದಿನ ಸಿನೆಮಾದಲ್ಲಿಯೂ ಭಾಷಾ ವೈವಿಧ್ಯತೆಯಿಂದ ಗುರುತಿಸಿಕೊಂಡಿರುವ ಡ್ಯಾನಿಶ್ ಇಲ್ಲಿ ಶಿವಾಜಿ ನಗರದ ರಿಕ್ಷಾ ಚಾಲಕ ಮುಸ್ಲಿಮನಾಗಿ ನ್ಯಾಯವೊದಗಿಸುವ ನಟನೆ ನೀಡಿದ್ದಾರೆ.

ಇದುವರೆಗಿನ ಕನ್ನಡ ಸಿನೆಮಾಗಳಲ್ಲಿ ಹೆಚ್ಚಾಗಿ ಬರುವ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಪಾತ್ರಗಳನ್ನು ಖಳನಾಯಕರಾಗಿ ನೋಡಿದ್ದೇ ಹೆಚ್ಚು. ಆದರೆ ಇಲ್ಲಿ ಬರುವ ಎರಡು ಪ್ರಧಾನ ಪಾಸಿಟಿವ್ ಕ್ಯಾರೆಕ್ಟರ್ಸ್ ಕೂಡ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಪಾತ್ರಗಳೇ ಆಗಿರುವುದು ವಿಶೇಷ. ಅದರಲ್ಲಿಯೂ ಸೈಮನ್ ಎನ್ನುವ ಫ್ರೆಂಚ್ ವ್ಯಕ್ತಿಯ ಪಾತ್ರಕ್ಕೆ ಜೀವ ತುಂಬಿರುವ ನಟ ಸಾಲ್ ಯೂಸುಫ್ ಹಾಸ್ಯದ ಜತೆಯಲ್ಲೇ, ಒಬ್ಬ ವಿದೇಶೀಯನ ಅಸಹಾಯಕತೆಯನ್ನು ತೋರಿಸುತ್ತಾ, ನಮ್ಮನ್ನು ಭಾವನಾತ್ಮಕಗೊಳಿಸುತ್ತಾರೆ. ಚಿತ್ರ ಪ್ರದರ್ಶನಕ್ಕೂ ಮೊದಲೇ ನಮ್ಮನ್ನು ಅಗಲಿ ಹೋದ ನಟ ಮೈಕಲ್ ಮಧು ಚಿತ್ರದಲ್ಲಿ ಡಾನ್ ಚಾರ್ಲ್ಸ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಕೂಡ ಮೊದಲ ದೃಶ್ಯದಲ್ಲೇ ಸಾವು ಕಾಣುವುದು ವಿಪರ್ಯಾಸವೇ ಸರಿ. ಚಿಕ್ಕಣ್ಣ ಒಂದೇ ದೃಶ್ಯದಲ್ಲಿ ಬಂದರೂ ಹುಚ್ಚನಾಗಿ ಸಿಕ್ಕಾಪಟ್ಟೆ ನಗಿಸುತ್ತಾರೆ. ‘ಒಂದಲ್ಲ ಎರಡಲ್ಲ’ ಖ್ಯಾತಿಯ ನಟ ನಾಗಭೂಷಣ್ ಪ್ರವೇಶವಾಗುವುದರ ಜತೆಗೆ ಇದು ಆ ಚಿತ್ರದಲ್ಲಿನ ‘ಹುಡುಕಾಟ’ ಸಾಗುವ ನೆನಪನ್ನೂ ಮೂಡಿಸಿ ಮರೆಯಾಗುತ್ತದೆ! ರಂಗಾಯಣ ರಘು ಅವರ ಪಾತ್ರದಲ್ಲಿ ವಿಶೇಷವೇನೂ ಇಲ್ಲ.

ಮೇಕಿಂಗ್ ವಿಚಾರ ತೆಗೆದುಕೊಂಡರೆ ಇಂತಹದ್ದೊಂದು ಛಾಯಾಗ್ರಹಣ, ಕಲರ್ ಫುಲ್ ಕ್ಯಾರಕ್ಟರ್ಸ್ ಕನ್ನಡದ ಮಟ್ಟಿಗೆ ಹೊಸತು. ಬಣ್ಣಗಳಿಗೆ ಜೀವ ನೀಡುವಂತೆ ವಾಸುಕಿ ವೈಭವ್ ಸಂಗೀತವಿದೆ. ಒಂದು ಹಾಡಿನ ಗಾಯಕಿ ಅದಿತಿ ಅರುಣ್ ಸಾಗರ್ ಸ್ವತಃ ಪರದೆಯ ಮೇಲೆಯೂ ಕಾಣಿಸಿಕೊಂಡಿದ್ದಾರೆ. ಇನ್ನೊಂದರಲ್ಲಿ ಸ್ವತಃ ನಿರ್ದೇಶಕ ಪನ್ನಗಾಭರಣ ಬಂದು ಹೋಗುತ್ತಾರೆ. ಸಂಭಾಷಣೆಗಳು ಚೆನ್ನಾಗಿವೆ. ಆದರೆ ಒಂದೆರಡು ಕಡೆ ಅಶ್ಲೀಲತೆಯ ಸೋಂಕಿದೆ. ಚಿತ್ರದಲ್ಲಿ ದೊಡ್ಡ ಸಂದೇಶವೇನೂ ಇಲ್ಲ. ಆದರೆ ತಮಾಷೆ, ವ್ಯಂಗ್ಯದ ಜೊತೆಯಲ್ಲೇ ನಾವು ಕಳೆದುಕೊಳ್ಳುತ್ತಿರುವ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಒಂದು ಕ್ಷಣ ಯೋಚಿಸುವಂತೆ ಮಾಡುವುದು ಸುಳ್ಳಲ್ಲ. ಸಂದೇಶ ಅರ್ಥವಾಗದವರು ಕೂಡ ಸಿನೆಮಾ ಎಂಜಾಯ್ ಮಾಡಬಹುದು. ಚಿತ್ರದ ಕೊನೆಯ ದೃಶ್ಯಗಳು ಒಂದು ಥಿಯೇಟರಲ್ಲಿ ನಡೆಯುತ್ತವೆ. ಆ ಥಿಯೇಟರ್ ಹೆಸರೇ ಕ್ಲೈಮ್ಯಾಕ್ಸ್. ಆದರೆ ಪ್ರೇಕ್ಷಕರು ‘ಫ್ರೆಂಚ್ ಬಿರಿಯಾನಿ’ ನೋಡಬೇಕಾದರೆ ಒಟಿಟಿ ಫ್ಲಾಟ್ ಫಾರ್ಮನ್ನೇ ಆಶ್ರಯಿಸಬೇಕು. ದಿನವೂ ಊಟವನ್ನಷ್ಟೇ ಮಾಡುವವರು ಒಮ್ಮೆ ಈ ಫ್ರೆಂಚ್ ಬಿರಿಯಾನಿಯ ರುಚಿ ನೋಡುವುದರಲ್ಲಿ ತಪ್ಪೇನಿಲ್ಲ.

ತಾರಾಗಣ: ಡ್ಯಾನಿಶ್ ಸೇಠ್, ಸಾಲ್ ಯೂಸುಫ್
ನಿರ್ದೇಶನ: ಪನ್ನಗಾಭರಣ
ನಿರ್ಮಾಣ: ಪಿ ಆರ್ ಕೆ ಪ್ರೊಡಕ್ಷನ್ಸ್

 

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News