ರಾಮಮಂದಿರ ಭೂಮಿಪೂಜೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಬಹುದು: ಉದ್ಧವ್ ಠಾಕ್ರೆ

Update: 2020-07-26 13:45 GMT

ಮುಂಬೈ, ಜು.26: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಆಗಸ್ಟ್ 5ರಂದು ರಾಮಮಂದಿರಕ್ಕೆ ಭೂಮಿಪೂಜೆ ನಡೆಯಲಿದೆ. ತಾನು ಕೂಡಾ ಹೋಗುವವನಿದ್ದೇನೆ. ಆದರೆ ಲಕ್ಷಾಂತರ ರಾಮಭಕ್ತರನ್ನು ಹೋಗದಂತೆ ತಡೆಯಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭೂಮಿಪೂಜೆ ನೆರವೇರಿಸಬಹುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನ ಕಾಯುತ್ತಿದ್ದಾರೆ. ನಾವು ಕೊರೋನ ವೈರಸ್ ಹರಡಲು ಅವಕಾಶ ಮಾಡಿಕೊಡಬೇಕೇ ಎಂದವರು ಪ್ರಶ್ನಿಸಿದ್ದಾರೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ರವಿವಾರ ಪ್ರಕಟವಾದ ಸಂದರ್ಶನದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೊರೋನ ಸೋಂಕು ಆಗಷ್ಟೇ ಆರಂಭವಾಗಿದ್ದ ಸಂದರ್ಭ ತಾನು ಅಯೋಧ್ಯೆಯ ಸರಯೂ ನದಿಯಲ್ಲಿ ‘ಆರತಿ’ ಸೇವೆ ಸಲ್ಲಿಸಲು ತೆರಳಿದ್ದೆ. ಆಗ ಅಧಿಕಾರಿಗಳು ತನ್ನನ್ನು ತಡೆದಿದ್ದರು. ಆಗ ನದಿಯ ದಂಡೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಈಗಲೂ ಭೂಮಿ ಪೂಜೆ ಸಂದರ್ಭ ಬೃಹತ್ ಪ್ರಮಾಣದಲ್ಲಿ ಭಕ್ತರು ಗುಂಪುಗೂಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News