ಹರ್ಭಜನ್, ಸೆಹ್ವಾಗ್, ಝಹೀರ್ ಖಾನ್ ಮತ್ತು ನನ್ನನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ: ಯುವರಾಜ್

Update: 2020-07-27 07:44 GMT

ಹೊಸದಿಲ್ಲಿ, ಜು.27: ನನ್ನ ವೃತ್ತಿಜೀವನದ ಕೊನೆಯಲ್ಲಿ ವೃತ್ತಿಪರತೆಗೆ ವಿರುದ್ಧವಾಗಿ ನನ್ನನ್ನು ನೋಡಿಕೊಳ್ಳಲಾಗಿತ್ತು ಎಂದು ಭಾರತದ ಮಾಜಿ ಆಲ್‌ ರೌಂಡರ್ ಯುವರಾಜ್ ಸಿಂಗ್ ನೋವು ಹೊರಹಾಕಿದ್ದಾರೆ.

ಭಾರತದ ಕಂಡ ಓರ್ವ ಶ್ರೇಷ್ಠ ಆಲ್ ‌ರೌಂಡರ್ ಆಗಿರುವ ಯುವರಾಜ್ ಕಳೆದ ವರ್ಷದ ಜೂನ್‌ನಲ್ಲಿ ತನ್ನ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.

ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಕೆಲವು ದಿಗ್ಗಜ ಆಟಗಾರರು ನಾನು ಎದುರಿಸಿದ್ದ ಪರಿಸ್ಥಿತಿಯನ್ನು ಎದುರಿಸಿದ್ದರು ಎಂದು ಉದಾಹರಣೆ ಸಹಿತ ವಿವರಿಸಿದ ಯುವಿ "ಕ್ರಿಕೆಟ್ ವೃತ್ತಿಜೀವನದ ಅಂತ್ಯದಲ್ಲಿ ನನಗೆ ಸಾಕಷ್ಟು ಗೌರವ ಲಭಿಸಲಿಲ್ಲ. ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್,ಝಹೀರ್ ಖಾನ್ ಕೂಡ ನಾನು ಎದುರಿಸಿದ್ದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಇವರನ್ನು ಕೆಟ್ಟದ್ದಾಗಿ ನಡೆಸಿಕೊಳ್ಳಲಾಗಿತ್ತು. ಇದು ಭಾರತೀಯ ಕ್ರಿಕೆಟ್‌ನ ಭಾಗವಾಗಿದೆ. ನಾನು ಇದನ್ನು ಈ ಮೊದಲು ನೋಡಿದ್ದೆ. ನನಗಿದು ಅಚ್ಚರಿ ಎನಿಸಲಿಲ್ಲ. ಭವಿಷ್ಯದಲ್ಲಿ ಭಾರತದ ಪರ ದೀರ್ಘ ಕಾಲ ಆಡಿದ್ದ ಆಟಗಾರ ಕಠಿಣ ಪರಿಸ್ಥಿತಿ ಎದುರಿಸದಂತೆ ನೋಡಿಕೊಳ್ಳಬೇಕಾಗಿದೆ. ಅವರಿಗೆ ಗೌರವಿಸಬೇಕು. ನಮಗೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಗೌತಮ್ ಗಂಭೀರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಸುನೀಲ್ ಗವಾಸ್ಕರ್ ಬಳಿಕ ಶ್ರೇಷ್ಠ ಮ್ಯಾಚ್ ವಿನ್ನರ್ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಝಹೀರ್ ಖಾನ್‌ಗೆ ಗೌರವ ನೀಡಬೇಕಾಗಿದೆ" ಎಂದು ಯುವರಾಜ್ ಹೇಳಿದರು.

2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್‌ನ್ನು ಭಾರತ ತಂಡ ಜಯಿಸುವಲ್ಲಿ ಯುವರಾಜ್ ಪ್ರಮುಖ ಪಾತ್ರವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News