ವೈದ್ಯಕೀಯ ಸೀಟುಗಳಲ್ಲಿ ಒಬಿಸಿ ಮೀಸಲಾತಿ ನಿರ್ಧರಿಸಲು ಸಮಿತಿ ರಚಿಸಲು ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

Update: 2020-07-27 14:55 GMT

 ಚೆನ್ನೈ, ಜು. 27: ಅಖಿಲ ಭಾರತ ಕೋಟಕ್ಕೆ ತಮಿಳುನಾಡು ಸರಕಾರ ನೀಡಿರುವ ವೈದ್ಯಕೀಯ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವ ಬಗ್ಗೆ ತೀರ್ಮಾನಿಸಲು ಸಮಿತಿ ರೂಪಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ ಹಾಗೂ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರನ್ನು ಒಳಗೊಂಡ ಪೀಠ, ಸಮಿತಿ ತೆಗೆದುಕೊಂಡ ನಿರ್ಧಾರವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ತರಬೇಕು. ಸಮಿತಿಯು ಕೇಂದ್ರ, ತಮಿಳುನಾಡು ಸರಕಾರ ಹಾಗೂ ಭಾರತೀಯ ವೈದ್ಯಕೀಯ ಮಂಡಳಿಯ ಪ್ರತಿನಿಧಿಗಳನ್ನು ಒಳಗೊಂಡಿರಬೇಕು ಎಂದು ಹೇಳಿದೆ.

ಅಖಿಲ ಭಾರತ ಕೋಟಾದ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗದ ಮೀಸಲಾತಿ ನೀಡಲು ಯಾವುದೇ ರೀತಿಯ ಕಾನೂನು ನಿರ್ಬಂಧ ಇಲ್ಲ ಎಂದು ಪೀಠ ಅಭಿಪ್ರಾಯಿಸಿದೆ. ಮೂಲಭೂತ ಹಕ್ಕುಗಳ ಪ್ರಶ್ನಾರ್ಹವಾದ ಸಂದರ್ಭದ ಪ್ರಕರಣಗಳನ್ನು ಹೊರತುಪಡಿಸಿ ಇದು ಸರಕಾರದ ನೀತಿಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅದು ಹೇಳಿದೆ.

ತಮಿಳುನಾಡಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಅಖಿಲ ಭಾರತ ಕೋಟಾದ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಕ್ಕೆ ಶೇ. 50 ಮೀಸಲಾತಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಬಾಕಿ ಇರುವ ಎಲ್ಲ ಅರ್ಜಿಗಳನ್ನು ಅರ್ಹತೆ ಆಧಾರದಲ್ಲಿ ತೀರ್ಮಾನಿಸುವಂತೆ ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿತ್ತು. ತಮಿಳುನಾಡು ಸರಕಾರ ನೀಡಿದ ಸೀಟುಗಳಲ್ಲಿ ಶೇ. 50ನ್ನು ಇತರ ಹಿಂದುಳಿದ ವರ್ಗಕ್ಕೆ ನೀಡದಿರುವ ನಿರ್ಧಾರವನ್ನು ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ತಮ್ಮ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜೂನ್ 11ರಂದು ನಿರಾಕರಿಸಿದ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ, ಆಲ್ ಇಂಡಿಯಾ ದ್ರಾವಿಡ ಮುನ್ನೇತ್ರ ಕಳಗಂ ಹಾಗೂ ಪಟ್ಟಾಲಿ ಮಕ್ಕಳ್ ಕಚ್ಚಿ ಹೈಕೋರ್ಟ್‌ನ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News