ಆಸ್ಪತ್ರೆಯಿಂದ ತಪ್ಪಿಸಿಕೊಂಡ ಕೊರೋನ ರೋಗಿ ಮೃತಪಟ್ಟ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆ

Update: 2020-07-27 16:12 GMT

ಲಕ್ನೊ, ಜು.27: ಉತ್ತರಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ಸರಕಾರಿ ಅಧೀನದ ಆಸ್ಪತ್ರೆಯಿಂದ ಶನಿವಾರ ಪರಾರಿಯಾಗಿದ್ದ 57 ವರ್ಷದ ಕೊರೋನ ಸೋಂಕು ಪೀಡಿತ ವ್ಯಕ್ತಿಯ ಮೃತದೇಹ ರವಿವಾರ ಸಂಜೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶನಿವಾರ ಸಂಜೆ 4:30ರ ವೇಳೆಗೆ ಆಸ್ಪತ್ರೆಯಿಂದ ಈತ ನಡೆದುಕೊಂಡು ಹೊರಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆಸ್ಪತ್ರೆಯವರ ನಿರ್ಲಕ್ಷ ಸಾವಿಗೆ ಕಾರಣ. ಅಲ್ಲದೆ ಆಸ್ಪತ್ರೆಯ ಸಿಬ್ಬಂದಿಗಳ ಕಿರುಕುಳ ತಾಳಲಾರದೆ ಆತ ಆಸ್ಪತ್ರೆಯಿಂದ ಓಡಿ ಹೋಗಿದ್ದಾನೆ ಎಂದು ಮೃತನ ಮನೆಯವರು ಆರೋಪಿಸಿದ್ದಾರೆ. ಶನಿವಾರ ಬೆಳಿಗ್ಗೆ ಆಸ್ಪತ್ರೆಯಿಂದ ಮನೆಗೆ ಕರೆ ಮಾಡಿದ್ದ ರೋಗಿ, ರಾತ್ರಿಯಿಡೀ ಬಾಯಿ ಒಣಗುತ್ತಿದ್ದರೂ ಯಾರೊಬ್ಬರೂ ನನ್ನ ಕೋರಿಕೆಯನ್ನು ಗಮನಿಸಲಿಲ್ಲ. ಅಲ್ಲದೆ ವೆಂಟಿಲೇಟರ್‌ನ ಕಾರಣದಿಂದ ಉಸಿರು ಕಟ್ಟಿದಂತಾಗುತ್ತದೆ ಎಂದು ಹೇಳಿರುವುದಾಗಿ ಮನೆಯವರು ಆರೋಪಿಸಿದ್ದಾರೆ. ಈ ಕುರಿತ ಸಂಭಾಷಣೆಯ ಧ್ವನಿಮುದ್ರಣವನ್ನೂ ಒದಗಿಸಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಆರೋಪವನ್ನು ನಿರಾಕರಿಸಿದ್ದಾರೆ.

 ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಯ ಆರೋಗ್ಯ ಸುಧಾರಿಸುತ್ತಿತ್ತು. ಆದರೆ ಆತ ಏಕಾಏಕಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ. ನಾವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಆಸ್ಪತ್ರೆಯ ಆಡಳಿತ ಮುಖ್ಯಸ್ಥರು ಹೇಳಿದ್ದಾರೆ.

  ಆಸ್ಪತ್ರೆಯಿಂದ ಸುಮಾರು 500 ಮೀಟರ್ ದೂರವಿರುವ ಕಾಡಿನಲ್ಲಿ ರೋಗಿಯ ಮೃತದೇಹ ಪತ್ತೆಯಾಗಿದ್ದು, ಪಿಪಿಇ ಧರಿಸಿರುವ ಆರೋಗ್ಯ ಇಲಾಖೆಯ ಸಿಬಂದಿಗಳು ಮೃತದೇಹವನ್ನು ಅಲ್ಲಿಂದ ಸಾಗಿಸುತ್ತಿರುವ ವೀಡಿಯೊ ದೃಶ್ಯ ಕೂಡಾ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News