ಚಿನ್ನ, ಬೆಳ್ಳಿ ದರ ದಾಖಲೆ ಮಟ್ಟಕ್ಕೆ ಏರಿಕೆ

Update: 2020-07-27 17:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.27: ವಾರದ ಆರಂಭದಲ್ಲಿಯೇ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದ್ದು, ಸೋಮವಾರ ಚಿನ್ನದ ದರದಲ್ಲಿ 800 ರೂ. ಮತ್ತು ಬೆಳ್ಳಿಯ ದರದಲ್ಲಿ 3,400 ರೂ. ಏರಿಕೆಯಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ದರ 51,833 ರೂ. ಮತ್ತು ಬೆಳ್ಳಿಯ ದರ ಕಿ.ಗ್ರಾಂಗೆ 64,617 ರೂ.ಗೆ ತಲುಪಿದೆ.

ಕಳೆದ ವಾರ ಚಿನ್ನ, ಬೆಳ್ಳಿಯ ದರದಲ್ಲಿ ಕ್ರಮವಾಗಿ 4% ಮತ್ತು 15% ಹೆಚ್ಚಳವಾಗಿತ್ತು. ಇದೀಗ ಚಿನ್ನದ ದರ ಕಳೆದ 9 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿದ್ದರೆ, ಬೆಳ್ಳಿಯ ದರ ಕಳೆದ 4 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಕ್ಷೇತ್ರದತ್ತ ಚಿತ್ತ ಹರಿಸಿರುವುದರಿಂದ ಎರಡೂ ಲೋಹಗಳ ಬೆಲೆ ದಾಖಲೆ ಮಟ್ಟಕ್ಕೆ ಹೆಚ್ಚಿದೆ. ಅಲ್ಲದೆ ಅಮೆರಿಕ-ಚೀನಾ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದೂ ಚಿನ್ನ, ಬೆಳ್ಳಿಯ ದರ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

   ಡಾಲರ್ ಬೆಲೆ ಕುಸಿದಿರುವುದು ಚಿನ್ನದ ದರ ಹೆಚ್ಚಳಕ್ಕೆ ಕಾರಣ ಎಂದು ಮಿಲ್‌ವುಡ್ ಕೇನ್ ಇಂಟರ್‌ನ್ಯಾಷನಲ್ ಎಂಬ ಹೂಡಿಕೆ ಸಲಹೆ ಸಂಸ್ಥೆಯ ಸಿಇಒ ನಿಶ್ ಭಟ್ಟ್ ಹೇಳಿದ್ದಾರೆ. ಅಲ್ಲದೆ ಇತರ ಆಸ್ತಿ ವರ್ಗದ ಮೌಲ್ಯ ಕುಸಿದಿರುವುದು ಹಾಗೂ ಜಾಗತಿಕ ಅನಿಶ್ಚಿತತೆಯ ಪರಿಸ್ಥಿತಿಯೂ ಚಿನ್ನದ ದರ ದಾಖಲೆ ಮಟ್ಟಕ್ಕೆ ಏರಲು ಕಾರಣ . ಜಾಗತಿಕವಾಗಿ ಕೊರೋನ ಸೋಂಕಿನ ಮೇಲೆ ನಿಯಂತ್ರಣ ಸಾಧಿಸಿ ಕೊರೋನಕ್ಕೆ ಲಸಿಕೆ ಸಿದ್ಧವಾಗುವವರೆಗೆ ಚಿನ್ನ, ಬೆಳ್ಳಿಯ ದರ ಅಧಿಕವಾಗಿರಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News