ಬುಧವಾರ ಭಾರತಕ್ಕೆ ಆಗಮಿಸಲಿರುವ ರಫೇಲ್ ಯುದ್ಧ ವಿಮಾನ

Update: 2020-07-28 15:47 GMT

ಹೊಸದಿಲ್ಲಿ, ಜು. 28: ಭಾರತದ ವಾಯುಪಡೆಯ ಬಲ ವೃದ್ಧಿಸಲಿರುವ ರಫೇಲ್ ಯುದ್ಧ ವಿಮಾನಗಳ ಮೊದಲ ತಂಡ ಫ್ರಾನ್ಸ್‌ನಿಂದ ಸೋಮವಾರ ಹೊರಟಿವೆ. 36 ವಿಮಾನಗಳ ಪೈಕಿ ಐದು ವಿಮಾನಗಳು ಹರ್ಯಾಣದ ಅಂಬಾಲದಲ್ಲಿರುವ ವಾಯು ನೆಲೆಗೆ ಬುಧವಾರ ಬಂದಿಳಿಯಲಿವೆ. ಈ ಹಿನ್ನೆಲೆಯಲ್ಲಿ ಅಂಬಾಲ ವಾಯು ನೆಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಈ ಸೆಕ್ಷನ್ ಅಡಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ವಾಯು ನೆಲೆಯಲ್ಲಿ ವೀಡಿಯೋಗ್ರಫಿ ಅಥವಾ ಫೋಟೋಗ್ರಫಿಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ವಾಯು ನೆಲೆಯಲ್ಲಿ ರಫೇಲ್ ಯುದ್ಧ ವಿಮಾನ ಬಂದಿಳಿಯುವ ಸಂದರ್ಭ ಭಾರತೀಯ ವಾಯು ಪಡೆಯ ವರಿಷ್ಠ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಉಪಸ್ಥಿತರಿರಲಿದ್ದಾರೆ. ಈ ಐದು ವಿಮಾನಗಳು ಫ್ರಾನ್ಸ್ ಹಾಗೂ ಭಾರತದ ನಡುವಿನ 7000 ಕಿ.ಮೀ. ಅಂತರವನ್ನು ಎರಡು ದಿನಗಳಲ್ಲಿ ಕ್ರಮಿಸಲಿದೆ ಹಾಗೂ ಬುಧವಾರ ಭಾರತಕ್ಕೆ ತಲುಪಲಿದೆ. ಈ ದೀರ್ಘ ಹಾರಾಟದ ಸಂದರ್ಭ ಆಕಾಶದಲ್ಲಿ ಇಂಧನ ತುಂಬಿಸಿಕೊಳ್ಳಲಿದೆ ಹಾಗೂ ಒಮ್ಮೆ ಮಾತ್ರ ಯುಎಇಯಲ್ಲಿ ನಿಲುಗಡೆಯಾಗಲಿದೆ.

 ಈ ವಿಮಾನಗಳಲ್ಲಿ ಒಂದು ಹಾಗೂ ಎರಡು ಸೀಟುಗಳ ವಿಮಾನಗಳು ಇರಲಿವೆ. ರಫೇಲ್ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್-ಭಾರತ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ತಂಡದಲ್ಲಿ ಐದು ವಿಮಾನಗಳು ಭಾರತಕ್ಕೆ ಬರುತ್ತಿವೆ. ಲಡಾಕ್‌ನಲ್ಲಿ ಭಾರತ-ಚೀನಾ ನಡುವೆ ಗಡಿ ಸಮಸ್ಯೆ ಉಂಟಾಗಿರುವ ಈ ಸಂದರ್ಭದಲ್ಲೇ ಈ ಬಲಿಷ್ಠ ವಿಮಾನಗಳು ವಾಯು ಪಡೆಗೆ ಸೇರ್ಪಡೆಯಾಗುತ್ತಿ ರುವುದು ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ. ಆಗಸ್ಟ್ ಮಧ್ಯಭಾಗದಲ್ಲಿ ವಿಮಾನಗಳ ಔಪಚಾರಿಕ ನಿಯೋಜನೆ ಕಾರ್ಯಕ್ರಮ ನಡೆಯಲಿದೆ ಎಂದು ವಾಯು ಪಡೆ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News