ಅಶೋಕ್ ಗೆಹ್ಲೋಟ್ ಮನವಿಯನ್ನು ಮೂರನೇ ಬಾರಿ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ
ಜೈಪುರ, ಜು.29: ರಾಜ್ಯ ವಿಧಾನಸಭೆಯ ಅಧಿವೇಶನ ಶುಕ್ರವಾರ(ಜು.31)ದಂದೇ ನಡೆಸಬೇಕೆಂದು ಕೋರಿ ಮೂರನೇ ಬಾರಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಲ್ಲಿಸಿರುವ ಪ್ರಸ್ತಾವದ ಮನವಿಯನ್ನು ರಾಜ್ಯಪಾಲ ಕಲರಾಜ್ ಮಿಶ್ರಾ ತಿರಸ್ಕರಿಸಿದ್ದಾರೆ. ಈಮೂಲಕ ಸದನ ನಡೆಸುವ ಕುರಿತು ರಾಜ್ಯಪಾಲ-ಮುಖ್ಯಮಂತ್ರಿಗಳ ನಡುವಿನ ಗುದ್ದಾಟ ಮುಂದುವರಿದಿದೆ.
ಮಂಗಳವಾರ ಸಂಪುಟ ಸಭೆ ನಡೆಸಿದ್ದ ಗೆಹ್ಲೋಟ್ ರಾಜ್ಯಪಾಲರು ಮುಂದಿಟ್ಟಿರುವ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುವ ಜೊತೆಗೆ ಸದನವನ್ನು ಕರೆಯುವಂತೆ ಮತ್ತೊಮ್ಮೆ ಬೇಡಿಕೆ ಇಡಲು ನಿರ್ಧರಿಸಿದರು. ಸದನ ಕರೆಯುವುದು ಸಂಪುಟದ ಹಕ್ಕು ಎಂದು ಗೆಹ್ಲೋಟ್ ಸಂಪುಟದ ಸಚಿವರೊಬ್ಬರು ಹೇಳಿಕೆಯನ್ನು ನೀಡಿದರು.
ಸದನ ನಡೆಸಲು 21 ದಿನಗಳ ನೋಟಿಸ್ ಅಗತ್ಯವಿದೆ ಎಂದಿರುವ ರಾಜ್ಯಪಾಲರು ಕೊರೋನ ವೈರಸ್ ಮುಂಜಾಗ್ರತಾ ಕ್ರಮ ಸಹಿತ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಈ ಹಿಂದೆ ಗೆಹ್ಲೋಟ್ ಸಲ್ಲಿಸಿರುವ ಎರಡು ಪ್ರಸ್ತಾವಗಳನ್ನು ತಿರಸ್ಕರಿಸಿದ್ದರು.ಪ್ರತಿಯಾಗಿ ಪತ್ರವನ್ನು ಬರೆದಿದ್ದರು.