ದೊಡ್ಡ ಪ್ರೊಡಕ್ಷನ್ ಸಂಸ್ಥೆಗಳನ್ನು ಹೆಸರಿಸುವಂತೆ ಸುಶಾಂತ್ ಕುಟುಂಬಕ್ಕೆ ಮುಂಬೈ ಪೊಲೀಸರ ಒತ್ತಡ: ವಕೀಲರ ಆರೋಪ

Update: 2020-07-29 09:16 GMT

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಸುಮಾರು ಒಂದು ತಿಂಗಳು ಕಳೆದ ನಂತರ ಅವರ ತಂದೆ ಪಾಟ್ನಾ ಪೊಲೀಸ್ ಠಾಣೆಯಲ್ಲಿ ನಟಿ ಹಾಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಕುತೂಹಲ ಕೆರಳಿಸಿದೆ. ರಿಯಾ ಹಾಗೂ ಆಕೆಯ ತಂದೆ ಸಹಿತ 5 ಮಂದಿಯ ವಿರುದ್ಧ  ಐಪಿಸಿಯ ವಿವಿಧ ಸೆಕ್ಷನ್ ‍ಗಳನ್ವಯ ಎಫ್‍ಐಆರ್ ದಾಖಲಾಗಿದೆ. ದೂರಿನಲ್ಲಿ ಅವರು ರಿಯಾ ಮತ್ತಿತರರ ವಿರುದ್ಧ ಸುಮಾರು 16 ಆರೋಪಗಳನ್ನು ಹೊರಿಸಿದ್ದಾರೆಂದು ಹೇಳಲಾಗಿದೆ.

ಅಧಿಕೃತ ಎಫ್‍ಐಆರ್ ದಾಖಲಾಗಲು ಬರೋಬ್ಬರಿ 44 ದಿನಗಳೇ ಏಕೆ ಬೇಕಾಯಿತೆಂಬುದರ ಕುರಿತು ವಿವರಣೆ ನೀಡಿರುವ ಸುಶಾಂತ್ ತಂದೆಯ ವಕೀಲ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕಾಸ್ ಸಿಂಗ್, “ಸುಶಾಂತ್ ಕುಟುಂಬ ಅವರ  ಸಾವಿನಿಂದ ಆಘಾತಕ್ಕೊಳಗಾಗಿದ್ದರಿಂದ ಹಾಗೂ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸುವ ಬದಲು ದೊಡ್ಡ ಪ್ರೊಡಕ್ಷನ್ ಸಂಸ್ಥೆಗಳ ಹೆಸರುಗಳನ್ನು ಉಲ್ಲೇಖಿಸಿ ಅವರನ್ನು ಪ್ರಕರಣದಲ್ಲಿ ಶಾಮೀಲುಗೊಳಿಸುವಂತೆ ಹೇರುತ್ತಿದ್ದ ಒತ್ತಡದಿಂದಾಗಿ ಈಗ  ದೂರು ದಾಖಲಿಸಲಾಗಿದೆ'' ಎಂದಿದ್ದಾರೆ.

ಸುಶಾಂತ್ ತಂದೆಯ ದೂರಿನಂತೆ ಎಫ್‍ಐಆರ್ ದಾಖಲಾದ ನಂತರ ಆರಂಭಿಕ ತನಿಖೆ ಆರಂಭಿಸಲಾಗಿದೆ. ದೂರಿನಲ್ಲಿ ಉಲ್ಲೇಖಿಸಲಾದ ಎಲ್ಲಾ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪಾಟ್ನಾ ಎಸ್‍ಪಿ ವಿನಯ್ ತಿವಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News