ಚೀನಾ ಜೊತೆಗಿನ ಸಂಬಂಧಕ್ಕೆ ಧಕ್ಕೆ ತರುವ ಉದ್ದೇಶವಿಲ್ಲ: ಆಸ್ಟ್ರೇಲಿಯ

Update: 2020-07-29 15:24 GMT

ವಾಶಿಂಗ್ಟನ್, ಜು. 29: ಅಮೆರಿಕ ಮತ್ತು ಅದರ ಆಪ್ತ ಮಿತ್ರದೇಶ ಆಸ್ಟ್ರೇಲಿಯ ಮಂಗಳವಾರ ಚೀನಾದ ಬಗ್ಗೆ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿವೆ ಹಾಗೂ ನಿಯಮಾಧಾರಿತ ಜಾಗತಿಕ ವ್ಯವಸ್ಥೆಯನ್ನು ಎತ್ತಿಹಿಡಿಯುವ ಅಗತ್ಯವನ್ನು ಪ್ರತಿಪಾದಿಸಿವೆ. ಆದರೆ ಇದೇ ಸಂದರ್ಭದಲ್ಲಿ ಚೀನಾದ ಜೊತೆಗಿನ ಆಸ್ಟ್ರೇಲಿಯದ ಸಂಬಂಧಕ್ಕೆ ಮಹತ್ವ ನೀಡಿರುವ ಆಸ್ಟ್ರೇಲಿಯದ ವಿದೇಶ ಸಚಿವೆ ಮಾರಿಸ್ ಪೇನ್, ಈ ಸಂಬಂಧಕ್ಕೆ ಧಕ್ಕೆ ತರುವ ಉದ್ದೇಶ ತನ್ನ ದೇಶಕ್ಕಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಆಸ್ಟ್ರೇಲಿಯದ ವಿದೇಶ ಮತ್ತು ರಕ್ಷಣಾ ಸಚಿವರೊಂದಿಗೆ ವಾಶಿಂಗ್ಟನ್‌ನಲ್ಲಿ ಎರಡು ದಿನಗಳ ಸಭೆ ನಡೆಸಿದರು.

ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಪಿಯೊ, ಚೀನಾದ ಒತ್ತಡವನ್ನು ಎದುರಿಸಿ ನಿಂತಿರುವುದಕ್ಕಾಗಿ ಆಸ್ಟ್ರೇಲಿಯವನ್ನು ಶ್ಲಾಘಿಸಿದರು. ದಕ್ಷಿಣ ಚೀನಾ ಸಮುದ್ರದಲ್ಲಿ ಕಾನೂನಿನ ಆಡಳಿತವನ್ನು ಸ್ಥಾಪಿಸುವುದಕ್ಕಾಗಿ ಅಮೆರಿಕ ಮತ್ತು ಆಸ್ಟ್ರೇಲಿಯಗಳು ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಟ್ರೇಲಿಯದ ವಿದೇಶ ಸಚಿವೆ, ಕಾನೂನಿನ ಆಡಳಿತಕ್ಕೆ ಅಮೆರಿಕ ಮತ್ತು ಆಸ್ಟ್ರೇಲಿಯಗಳು ಬದ್ಧವಾಗಿವೆ ಎಂದರು. ಹಾಂಕಾಂಗ್‌ನಲ್ಲಿ ಚೀನಾ ನಡೆಸುತ್ತಿರುವ ನಾಗರಿಕ ಹಕ್ಕುಗಳ ದಮನ ಸೇರಿದಂತೆ ಯಾವುದೇ ದೇಶಗಳು ನಡೆಸುತ್ತಿರುವ ಉಲ್ಲಂಘನೆಗಳನ್ನು ತನ್ನ ದೇಶ ಸಹಿಸುವುದಿಲ್ಲ ಎಂದು ಅವರು ನುಡಿದರು.

‘‘ಅದೇ ವೇಳೆ, ಚೀನಾದೊಂದಿಗಿನ ಸಂಬಂಧವೂ ಆಸ್ಟ್ರೇಲಿಯಕ್ಕೆ ಮಹತ್ವದ್ದಾಗಿದೆ ಹಾಗೂ ಅದನ್ನು ಘಾಸಿಗೊಳಿಸುವ ಉದ್ದೇಶ ನಮಗಿಲ್ಲ’’ ಎಂದು ಆಸ್ಟ್ರೇಲಿಯದ ವಿದೇಶ ಸಚಿವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News