ಪ್ರಶಾಂತ್ ಭೂಷಣ್ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹಿಸುವ ಹೇಳಿಕೆಗೆ ಸುಪ್ರೀಂ ಕೋರ್ಟ್ ನ 7 ಮಾಜಿ ನ್ಯಾಯಾಧೀಶರ ಸಹಿ

Update: 2020-07-30 10:44 GMT

ಹೊಸದಿಲ್ಲಿ: ಕಳೆದ ವಾರ ಸುಪ್ರೀಂ ಕೋರ್ಟಿನಿಂದ ನ್ಯಾಯಾಂಗ ನಿಂದನೆ ನೋಟಿಸ್ ಪಡೆದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಬೆಂಬಲಿಸಿ 131 ಸಾಮಾಜಿಕ ಹೋರಾಟಗಾರರು, ನ್ಯಾಯಾಂಗ ತಜ್ಞರು ಹಾಗೂ ವಕೀಲರು ನೀಡಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್‍ನ ಏಳು ಮಂದಿ ಮಾಜಿ ನ್ಯಾಯಾಧೀಶರು ಸಹಮತ ವ್ಯಕ್ತಪಡಿಸಿ ಹೇಳಿಕೆಗೆ ಸಹಿ ಹಾಕಿದ್ದಾರೆ.

ಮಾಜಿ ನ್ಯಾಯಮೂರ್ತಿಗಳಾದ ರುಮಾ ಪಾಲ್, ಜಿ ಎಸ್ ಸಿಂಘ್ವಿ, ಎ ಕೆ ಗಂಗೂಲಿ, ಗೋಪಾಲ ಗೌಡ, ಅಫ್ತಾಬ್ ಅಸ್ಲಂ, ಜಸ್ತಿ ಚೆಲಮೇಶ್ವರ್  ಹಾಗೂ ವಿಕ್ರಮ್ ಜಿತ್ ಸಹಿ ಹಾಕಿದವರಾಗಿದ್ದಾರೆ.

ಸುಪ್ರೀಂ ಕೋರ್ಟ್ ನ ಘನತೆ ಕಾಪಾಡಲು ಹಾಗೂ ನ್ಯಾಯ ಮತ್ತು ನಿಷ್ಪಕ್ಷಪಾತದ ಹಿತದೃಷ್ಟಿಯಿಂದ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ವಾಪಸ್ ಪಡೆಯಬೇಕೆಂದು ಹೇಳಿಕೆಯಲ್ಲಿ ಕೋರಲಾಗಿದೆ.

ಈ ಹೇಳಿಕೆಗೆ ಆರಂಭದಲ್ಲಿ ಸಹಿ ಹಾಕಿದ 131 ಮಂದಿಯಲ್ಲಿ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್,  ದಿಲ್ಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಎ ಪಿ ಶಾ, ಪಾಟ್ನಾ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ಅಂಜನಾ ಪ್ರಕಾಶ್, ಇತಿಹಾಸಕಾರ ರಾಮಚಂದ್ರ ಗುಹಾ, ಲೇಖಕಿ ಅರುಂಧತಿ ರಾಯ್, ವಕೀಲೆ ಇಂದಿರಾ ಜೈಸಿಂಗ್, ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಹಾಗೂ ಸ್ವರಾಜ್ ಇಂಡಿಯಾ ಅಧ್ಯಕ್ಷ  ಯೋಗೇಂದ್ರ ಯಾದವ್  ಸೇರಿದ್ದಾರೆ.

ನ್ಯಾಯಾಲಯವು ಭೂಷಣ್ ವಿರುದ್ಧ ಸ್ವಯಂಪ್ರೇರಣೆಯಿಂದ ದಾಖಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮರುಪರಿಶೀಲಿಸಬೇಕೆಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಜಸ್ಟಿಸ್ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಜುಲೈ 22ರಂದು ಪ್ರಶಾಂತ್ ಭೂಷಣ್ ಹಾಗೂ ಟ್ವಿಟರ್ ಇಂಡಿಯಾಗೆ ನೋಟಿಸ್ ಜಾರಿಗೊಳಿಸಿತ್ತು. ಹಾಲಿ ಮತ್ತು ಮಾಜಿ ಸಿಜೆಐ ಕುರಿತಂತೆ ಅವರು ಮಾಡಿದ್ದ ಟ್ವೀಟ್‍ ಗೆ ಈ  ನೋಟಿಸ್ ಜಾರಿಯಾಗಿತ್ತಲ್ಲದೆ ಮೇಲ್ನೋಟಕ್ಕೆ ಅವರು ನ್ಯಾಯದಾನ ಪ್ರಕ್ರಿಯೆಯನ್ನು ಅವಮಾನಿಸಿದ್ದಾರೆಂದು ಹೇಳಿತ್ತು.

`ಕಳೆದ ಆರು ವರ್ಷಗಳಲ್ಲಿ ಪ್ರಜಾಪ್ರಭುತ್ವದ ನಾಶದಲ್ಲಿ ಸುಪ್ರೀಂ ಕೋರ್ಟ್ ನ ಪಾತ್ರ' ಎಂದು ಭೂಷಣ್ ಜೂನ್ 27ರಂದು ಟ್ವೀಟ್ ಮಾಡಿ ಇದರಲ್ಲಿ `ಕಳೆದ ಮಾಜಿ ಸಿಜೆಐಗಳ' ಪಾತ್ರವನ್ನೂ ಉಲ್ಲೇಖಿಸಿದ್ದರು. ಜೂನ್ 29ರಂದು ಮಾಡಿದ್ದ ಟ್ವೀಟ್ ‍ನಲ್ಲಿ ಈಗಿನ ಸಿಜೆಐ ಜಸ್ಟಿಸ್ ಎಸ್ ಎ ಬೊಬ್ಡೆ ಅವರು ಹಾರ್ಲೆ ಡೇವಿಡ್ಸನ್ ಬೈಕ್ ಏರಿದ್ದರ ಕುರಿತಾಗಿತ್ತು. “ಸುಪ್ರೀಂ ಕೋರ್ಟ್ ಅನ್ನು ಲಾಕ್ ಡೌನ್ ಮೋಡ್‍ ನಲ್ಲಿರಿಸಿ ಅವರು ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸಿಲ್ಲ” ಎಂದು ಭೂಷಣ್ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News