ಆದಿತ್ಯನಾಥ್ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲಿಸಿದ್ದ ವ್ಯಕ್ತಿಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ
ಹೊಸದಿಲ್ಲಿ: ಗೋರಖಪುರ್ ನಲ್ಲಿ 2007ರಲ್ಲಿ ನಡೆದ ಕೋಮುಗಲಭೆ ಪ್ರಕರಣದ ಸಂದರ್ಭ ಆಗ ಗೋರಖಪುರ್ ಸಂಸದರಾಗಿದ್ದ ಆದಿತ್ಯನಾಥ್ ವಿರುದ್ಧ ದ್ವೇಷದ ಭಾಷಣ ಆರೋಪ ಹೊರಿಸಿದ್ದ ಸಹ ಅಪೀಲುದಾರ, 65 ವರ್ಷದ ಸಾಮಾಜಿಕ ಕಾರ್ಯಕರ್ತ ಪರ್ವೇಝ್ ಪರ್ವಾಝ್‍ಗೆ ಎರಡು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಮುಖ ಆರೋಪಿ ಮೆಹಮೂದ್ ಅಲಿಯಾಸ್ ಜುಮ್ಮನ್ ಬಾಬಾ ಹಾಗೂ ಪರ್ವಾಝ್ ಅವರು ಜೂನ್ 3, 2018ರಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳು ಎಂದು ಜಿಲ್ಲಾ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ದೂರುದಾರೆ 30 ವರ್ಷದ ತರಕಾರಿ ಮಾರಾಟ ಮಾಡುವ ಮಹಿಳೆಯಾಗಿದ್ದು, ಇಬ್ಬರು ಆರೋಪಿಗಳು ತನ್ನ ಮನವೊಲಿಸಿ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದಿದ್ದರೆಂದು ಆರೋಪಿಸಿದ್ದರು. ಇಬ್ಬರಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ಜತೆಗೆ ತಲಾ 25,000 ರೂ. ದಂಡ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದ್ದು, ದಂಡ ಮೊತ್ತದ ಪೈಕಿ ರೂ 40,000 ದೂರುದಾರೆಯ ಪುನರ್ವಸತಿಗೆ ಬಳಸಲಾಗುವುದು.
ಪರ್ವಾಝ್ ಆದಿತ್ಯನಾಥ್ ಹಾಗೂ ಬಿಜೆಪಿ ಶಾಸಕರುಗಳಾದ ರಾಧಾಮೋಹನ್ ದಾಸ್ ಅಗರ್ವಾಲ್, ಶಿವ ಪ್ರತಾಪ್ ಶುಕ್ಲಾ, ಆಗ ಮೇಯರ್ ಆಗಿದ್ದ ಅಂಜು ಚೌಧುರಿ ಹಾಗೂ ಮಾಜಿ ಬಿಜೆಪಿ ಪರಿಷತ್ ಸದಸ್ಯರಾದ ವೈ ಡಿ ಸಿಂಗ್ ವಿರುದ್ಧ ದ್ವೇಷದ ಭಾಷಣ ಪ್ರಕರಣ ದಾಲಿಸಿದ್ದರಿಂದ ಅವರನ್ನು ಈ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಹಾಗೂ 2007ರಿಂದ ಅವರ ವಿರುದ್ಧ ಹಲವು ಆರೋಪಗಳನ್ನು ಹೊರಿಸಲಾಗಿದೆ ಎಂದು ಪರ್ವಾಝ್ ಅವರ ಸ್ನೇಹಿತರು ಆರೋಪಿಸಿದ್ದಾರೆ.