ಮುಕ್ಕಮ್ ಮುಸ್ಲಿಂ ಅನಾಥಾಲಯದ ವಿರುದ್ಧದ ಮಕ್ಕಳ ಕಳ್ಳಸಾಗಣೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ತಿರುವನಂತಪುರಂ : ಕೇರಳದ ಕೋಯಿಕ್ಕೋಡ್ ನಲ್ಲಿರುವ ಮುಕ್ಕಮ್ ಮುಸ್ಲಿಂ ಅನಾಥಾಲಯದ ವಿರುದ್ಧ ದಾಖಲಾಗಿದ್ದ ಮಕ್ಕಳ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅನಾಥಾಲಯಕ್ಕೆ ಕ್ಲೀನ್ ಚಿಟ್ ನೀಡಿ ಎರ್ಣಾಕುಳಂನಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬೆನ್ನಿಗೇ ಕೇರಳ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸುವ ಆದೇಶ ನೀಡಿದೆ.
ಮೇ 24, 2014ರಂದು ಮಕ್ಕಳ ಕಳ್ಳಸಾಗಣಿಕೆ ನಡೆಯುತ್ತಿದೆ ಎಂಬ ಸಂಶಯದ ಮೇಲೆ ಪಾಲಕ್ಕಾಡ್ ನಿಲ್ದಾಣದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ 457 ಮಕ್ಕಳು ಹಾಗೂ 40 ವಯಸ್ಕರನ್ನು ವಶಕ್ಕೆ ಪಡೆದುಕೊಂಡಿತ್ತು. ಮಕ್ಕಳಲ್ಲಿ ಹೆಚ್ಚಿನವರು ಬಿಹಾರ ಹಾಗೂ ಜಾರ್ಖಂಡ್ ನವರಾಗಿದ್ದರು ಹಾಗೂ ಎಲ್ಲರೂ ಅನಾಥಾಲಯಕ್ಕೆ ತೆರಳುತ್ತಿರುವಾಗ ಈ ಘಟನೆ ನಡೆದಿತ್ತು.
ನಂತರ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ವಹಿಸಲಾಗಿತ್ತು. ಮುಂದೆ 150 ಮಕ್ಕಳನ್ನು ಅವರ ಊರುಗಳಿಗೆ ವಾಪಸ್ ಕಳುಹಿಸಲಾಗಿದ್ದರೆ, ಉಳಿದ ಮಕ್ಕಳನ್ನು ಅನಾಥಾಲಯಕ್ಕೆ ಕಳುಹಿಸಲಾಗಿತ್ತು. ಮಕ್ಕಳ ಜತೆಗಿದ್ದ ಕೆಲವರ ವಿರುದ್ಧ ಮಾನವ ಕಳ್ಳಸಾಗಣಿಕೆ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.
ಮಕ್ಕಳನ್ನು ಅವರ ಹೆತ್ತವರೇ ಉತ್ತಮ ಜೀವನ ದೊರೆಯುವುದೆಂಬ ಆಶಾವಾದದಿಂದ ಕಳುಹಿಸಿದ್ದರೇ ವಿನಃ ಯಾರದ್ದೇ ಒತ್ತಡದಿಂದಲ್ಲ ಹಾಗೂ ಅನಾಥಾಲಯ ತನ್ನ ಸೇವೆಗಳಿಗೆ ಕೇಂದ್ರ ಸರಕಾರದಿಂದ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ ಎಂಬುದು ಸಿಬಿಐ ವರದಿಯಲ್ಲಿ ಉಲ್ಲೇಖವಾಗಿದೆ.
ಅನಾಥಾಲಯದಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ಸೌಕರ್ಯ ಒದಗಿಸಲಾಗುತ್ತಿದೆ ಎಂಬುದೂ ವರದಿಯಲ್ಲಿ ಹೇಳಲಾಗಿದೆ.