ಶ್ರೀರಾಮನ ತಾಯಿ ಕೌಸಲ್ಯಾ ದೇವಿಯ ದೇವಸ್ಥಾನ ನಿರ್ಮಾಣ ಆಗಸ್ಟ್ ನಲ್ಲಿ ಆರಂಭ: ಛತ್ತೀಸ್ ಗಢ ಸಿಎಂ
ರಾಯಪುರ್ : ರಾಯಪುರ್ ನಲ್ಲಿರುವ ಶ್ರೀ ರಾಮನ ತಾಯಿ ಮಾತೆ ಕೌಸಲ್ಯಾ ಹೆಸರಿನಲ್ಲಿರುವ ಪ್ರಾಚೀನ ದೇವಸ್ಥಾನದ ವಿಸ್ತರಣಾ ಯೋಜನೆಗೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ನೆರವೇರಿಸಿದ್ದಾರೆ.
ದೇಗುಲ ನಿರ್ಮಾಣ ಕಾಮಗಾರಿ ಆಗಸ್ಟ್ ತಿಂಗಳ ಮೂರನೇ ವಾರದಿಂದ ಆರಂಭಗೊಳ್ಳಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ಸಮಾರಂಭ ನೆರವೇರುವ ಕೆಲವೇ ದಿನಗಳಿಗೆ ಮುಂಚಿತವಾಗಿ ಶ್ರೀ ರಾಮನ ತಾಯಿಯ ದೇವಸ್ಥಾನಕ್ಕೆ ಶಂಕುಸ್ಥಾಪನೆ ನೆರವೇರಿರುವುದು ವಿಶೇಷವಾಗಿದೆ.
ರಾಯಪುರ್ ನಲ್ಲಿ ಮಾತಾ ಕೌಸಲ್ಯಾ ದೇವಾಲಯಕ್ಕೆ ಸರಕಾರ ರೂ 15 ಕೋಟಿ ವಿನಿಯೋಗಿಸಲಿದೆ. ಬುಧವಾರದ ಕಾರ್ಯಕ್ರಮಕ್ಕೆ ಚಂದ್ಖುರಿ ಗ್ರಾಮದಲ್ಲಿರುವ ದೇವಳಕ್ಕೆ ಮುಖ್ಯಮಂತ್ರಿ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿದ್ದರು.
“ಛತ್ತೀಸಗಢ ಶ್ರೀ ರಾಮನ ತವರು ಮನೆಯಾಗಿದೆ. ಆತ ವನವಾಸದಲ್ಲಿರುವ ಸಂದರ್ಭ ಬಹಳಷ್ಟು ಸಮಯ ಛತ್ತೀಸಗಢದಲ್ಲಿ ಕಳೆದಿದ್ದ. ರಾಜ್ಯ ಸರಕಾರ ರಾಮ ವನ ಗಮನ್ ಮಾರ್ಗ್ ಅನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲಿದೆ'' ಎಂದು ಅವರು ಹೇಳಿದ್ದಾರೆ.