24 ಗಂಟೆಯಲ್ಲಿ ಹೊಸ 52,123 ಕೊರೋನ ಸೋಂಕು ಪ್ರಕರಣ ಪತ್ತೆ
ಹೊಸದಿಲ್ಲಿ, ಜು. 30: ದೇಶಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 52,123 ಕೊರೋನ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 755 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಕೊರೋನ ಸೋಂಕಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದ್ದು, 34,968 ಮಂದಿ ಸಾವಿಗೀಡಾಗಿದ್ದಾರೆ.
ಇದುವರೆಗೆ 10,20,582 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ದೇಶದಲ್ಲಿ 5,28,242 ಸಕ್ರಿಯ ಪ್ರಕರಣಗಳು ಇವೆ. ಇದರೊಂದಿಗೆ ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರವವರ ಪ್ರಮಾಣ ಶೇ. 64.44ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಜುಲೈ 29ರ ವರೆಗೆ ಒಟ್ಟು 1,81,90,382 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಬುಧವಾರ ಒಂದೇ ದಿನ 4,46,642 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ. ಒಟ್ಟು 755 ಸಾವಿನಲ್ಲಿ ಮಹಾರಾಷ್ಟ್ರದಲ್ಲಿ 298, ಕರ್ನಾಟಕದಲ್ಲಿ 92, ತಮಿಳುನಾಡಿನಲ್ಲಿ 82, ಆಂಧ್ರಪ್ರದೇಶದಲ್ಲಿ 65, ಪಶ್ಚಿಮಬಂಗಾಳದಲ್ಲಿ 41, ಉತ್ತರಪ್ರದೇಶದಲ್ಲಿ 33, ದಿಲ್ಲಿಯಲ್ಲಿ 26, ಪಂಜಾಬ್‌ನಲ್ಲಿ 25, ಗುಜರಾತ್‌ನಲ್ಲಿ 24, ಜಮ್ಮು ಹಾಗೂ ಕಾಶ್ಮೀರದಲ್ಲಿ 15, ಮಧ್ಯಪ್ರದೇಶದಲ್ಲಿ 13 ಹಾಗೂ ತೆಲಂಗಾಣದಲ್ಲಿ 12 ಸಾವು ಸಂಭವಿಸಿದೆ. ಬಿಹಾರ ಹಾಗೂ ಜಾರ್ಖಂಡ್‌ನಲಿ ತಲಾ 9, ಹರ್ಯಾಣ 7, ರಾಜಸ್ಥಾನ 6, ಒಡಿಸ್ಸಾ 5, ಅಸ್ಸಾಂ 4, ಗೋವಾ 3 ಉತ್ತರಾಖಂಡ, ಚತ್ತೀಸ್‌ಗಢದಲ್ಲಿ ತಲಾ 2, ಕೇರಳ, ಅಂಡಮಾನ್ ಹಾಗೂ ನಿಗೋಬಾರ್ ದ್ವೀಪಗಳಲ್ಲಿ ತಲಾ 1 ಸಾವು ವರದಿಯಾಗಿದೆ.
ದೇಶದಲ್ಲಿ ಅತಿ ಹೆಚ್ಚು ಕೋರೊನ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 3.9 ಲಕ್ಷ ಮಂದಿ ಸೋಂಕು ದೃಢಪಟ್ಟಿದ್ದು, 14,165 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 2.2 ಲಕ್ಷ ಮಂದಿಗೆ ಸೋಂಕು ತಗಲಿದ್ದು, 3,659 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ 1.3 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, 3,881 ಮಂದಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ 1.1 ಲಕ್ಷ ಜನರಿಗೆ ಸೋಂಕು ತಗಲಿದ್ದು, 1,148 ಮಂದಿ ಗುಣಮುಖರಾಗಿದ್ದಾರೆ.