ಗೂಗಲ್, ಫೇಸ್‌ಬುಕ್, ಆ್ಯಪಲ್, ಅಮೆಝಾನ್ ಸಿಇಒಗಳ ಬೆವರಿಳಿಸಿದ ಅಮೆರಿಕ ಸಂಸದರು!

Update: 2020-07-30 15:59 GMT

ವಾಶಿಂಗ್ಟನ್, ಜು. 30: ಜಾಗತಿಕ ತಂತ್ರಜ್ಞಾನ ದೈತ್ಯ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಬುಧವಾರ 5 ಗಂಟೆಗೂ ಅಧಿಕ ಅವಧಿಗೆ ಅಮೆರಿಕದ ಸಂಸದರು ತೀವ್ರ ವಿಚಾರಣೆಗೆ ಒಳಪಡಿಸಿದರು. ಕಂಪೆನಿಗಳು ಮಾರುಕಟ್ಟೆಯಲ್ಲಿನ ತಮ್ಮ ಎದುರಾಳಿಗಳನ್ನು ಮಣಿಸಲು ಪ್ರಾಬಲ್ಯವನ್ನು ಬಳಸುವುದನ್ನು ನಿಷೇಧಿಸುವ (ಆ್ಯಂಟಿ ಟ್ರಸ್ಟ್) ಕಾನೂನಿನಡಿ ಅವರ ವಿಚಾರಣೆ ನಡೆಯಿತು.

ಈ ವಿಚಾರಣೆಯ ಫಲಿತಾಂಶದ ಆಧಾರದಲ್ಲಿ ಸಂಸತ್ತು ಜಾಗತಿಕ ತಂತ್ರಜ್ಞಾನ ದೈತ್ಯರ ವಿರುದ್ಧ ಇನ್ನಟ್ಟು ಕಠಿಣ ನಿರ್ಬಂಧಗಳನ್ನು ವಿಧಿಸಬಹುದಾಗಿದೆ ಹಾಗೂ ಮತ್ತಷ್ಟು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

ಆ್ಯಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಟಿಮ್ ಕುಕ್, ಅಮೆಝಾನ್ ಕಂಪೆನಿಯ ಸಿಇಒ ಜೆಫ್ ಬೆಝಾಸ್, ಫೇಸ್‌ಬುಕ್ ಕಂಪೆನಿಯ ಸಿಇಒ ಮಾರ್ಕ್ ಝುಕರ್‌ಬರ್ಗ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಏಕಕಾಲದಲ್ಲಿ ವೀಡಿಯೊ ಲಿಂಕ್ ಮೂಲಕ, ಮಾರುಕಟ್ಟೆ ಪ್ರಾಬಲ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಥಾಯಿ ಸಮಿತಿಯೊಂದರ ಮುಂದೆ ಹಾಜರಾದರು.

ಈ ವಿಚಾರಣೆಯನ್ನು ಮುಖ್ಯವಾಗಿ, ಕಂಪೆನಿಗಳು ತಮ್ಮ ಮಾರುಕಟ್ಟೆ ಪ್ರಾಬಲ್ಯವನ್ನು ಎದುರಾಳಿಗಳನ್ನು ದಮನಿಸಲು ದುರುಪಯೋಗಪಡಿಸುತ್ತಿವೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುವುದಕ್ಕಾಗಿ ಏರ್ಪಡಿಸಲಾಗಿತ್ತು. ಆದರೆ, ಬಳಿಕ ಅದು ರಾಜಕೀಯ ಒಲವು, ಖಾಸಗಿತನ, ಚೀನಾದೊಂದಿಗಿನ ವ್ಯವಹಾರ ಮತ್ತು ಅಪಪ್ರಚಾರವನ್ನು ಕಂಪೆನಿಗಳು ಹೇಗೆ ನಿಭಾಯಿಸುತ್ತಿವೆ ಎನ್ನುವುದು ಸೇರಿದಂತೆ ಹಲವು ಇತರ ವಿಷಯಗಳತ್ತವೂ ಹೊರಳಿತು.

‘‘ಸರಳವಾಗಿ ಹೇಳುವುದಾದರೆ, ಅವರಲ್ಲಿ ಅಪರಿಮಿತ ಅಧಿಕಾರವಿದೆ’’ ಎಂದು ರೋಡ್ ಐಲ್ಯಾಂಡ್‌ನ ಡೆಮಾಕ್ರಟಿಕ್ ಪಕ್ಷದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ಡೇವಿಡ್ ಸಿಸಿಲೈನ್ ಹೇಳಿದರು. ಅವರು ಈ ನಾಲ್ಕು ಜಾಗತಿಕ ತಂತ್ರಜ್ಞಾನ ದೈತ್ಯರ ವ್ಯಾಪಾರ ವ್ಯಾಪಾರ ರೀತಿಗಳ ಬಗ್ಗೆ ಒಂದು ವರ್ಷ ಕಾಲ ತನಿಖೆ ನಡೆಸಿದ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಈ ಕಂಪೆನಿಗಳಿಗೆ ಏಕಸ್ವಾಮ್ಯ ಅಧಿಕಾರವಿದೆ ಎನ್ನುವುದು ವಿಚಾರಣೆಯಿಂದ ದೃಢಪಟ್ಟಿದೆ ಎಂದು ಅವರು ಹೇಳಿದರು. ಈ ಪೈಕಿ ಕೆಲವು ಅಧಿಕಾರಗಳನ್ನು ಮುರಿಯಬೇಕಾಗಿದೆ ಹಾಗೂ ಎಲ್ಲ ಅಧಿಕಾರಗಳನ್ನು ಸರಿಯಾಗಿ ನಿಯಂತ್ರಿಸಬೇಕಾಗಿದೆ ಹಾಗೂ ಇದಕ್ಕಾಗಿ ಕಂಪೆನಿಗಳನ್ನು ಉತ್ತರದಾಯಿಯನ್ನಾಗಿಸಬೇಕಾಗಿದೆ ಎಂದರು.

ಗೂಗಲ್ ಮಾಹಿತಿಗಳನ್ನು ಕದಿಯುತ್ತಿದೆ: ಸಿಸಿಲೈನ್

ಗೂಗಲ್‌ನ ಸರ್ಚ್ ಇಂಜಿನ್‌ಗೆ ಸಂಬಂಧಿಸಿ ಸಿಸಿಲೈನ್ ಅದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈಯವರನ್ನು ತರಾಟೆಗೆ ತೆಗೆದುಕೊಂಡರು. ಸರ್ಚ್ ಇಂಜಿನ್ ಬಳಕೆದಾರರನ್ನು ಇಂಟರ್‌ನೆಟ್‌ನಲ್ಲಿರುವ ಇತರ ಮೂಲಗಳಿಗೆ ಬಳಕೆದಾರರನ್ನು ಕಳುಹಿಸಿಕೊಡುವ ಬದಲು, ಅವರನ್ನು ತನ್ನಲ್ಲೇ ಇಟ್ಟುಕೊಳ್ಳುವ ಉದ್ದೇಶದಿಂದ ಮಾಹಿತಿಗಳನ್ನು ಬೇರೆ ಮೂಲಗಳಿಂದ ಕದಿಯುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನು ಲಭ್ಯವಿರುವ ಪುರಾವೆಗಳು ಸ್ಪಷ್ಟಪಡಿಸಿವೆ ಎಂದು ಅವರು ಹೇಳಿದರು.

‘‘ಗೂಗಲ್, ಇಂಟರ್‌ನೆಟ್‌ನ ಪ್ರಧಾನ ದ್ವಾರವಾದಂದಿನಿಂದ ಅದು ತನ್ನ ಪ್ರಭಾವವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ’’ ಎಂದರು. ‘‘ತನಗೆ ಬೆದರಿಕೆಯಾಗಬಲ್ಲ ಸ್ಪರ್ಧಿಗಳನ್ನು ಗುರುತಿಸಲು ಹಾಗೂ ಅವರನ್ನು ದಮನಿಸಲು ಅದು ವೆಬ್ ಟ್ರಾಫಿಕ್ ಮೇಲೆ ಬೇಹುಗಾರಿಕೆ ನಡೆಸುತ್ತಿದೆ’’ ಎಂದು ಅವರು ಆರೋಪಿಸಿದರು.

‘‘ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಳ್ಳಲು ಬಯಸುವ ಯಾವುದೇ ಉದ್ಯಮಗಳು ಗೂಗಲ್‌ಗೆ ತೆರಿಗೆ ಪಾವತಿಸಬೇಕಾಗಿದೆ’’ ಎಂದು ಡೇವಿಡ್ ಸಿಸಿಲೈನ್ ನುಡಿದರು.

ಇನ್‌ಸ್ಟಾಗ್ರಾಂ ಖರೀದಿ ಸ್ಪರ್ಧಾ ವಿರೋಧಿ

ಬೆಳೆಯುತ್ತಿರುವ ತನ್ನ ಎದುರಾಳಿಯೊಂದನ್ನು ನಿಷ್ಕ್ರಿಯಗೊಳಿಸುವುದಕ್ಕಾಗಿ ಫೇಸ್‌ಬುಕ್ 2012ರಲ್ಲಿ ಇನ್‌ಸ್ಟಾಗ್ರಾಂನ್ನು ಖರೀದಿಸಿತು ಎನ್ನುವುದನ್ನು ದಾಖಲೆಗಳು ತೋರಿಸಿವೆ ಎಂದು ಹೌಸ್ ನ್ಯಾಯಾಂಗ ಸಮಿತಿಯ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಜೆರಾಲ್ಡ್ ನ್ಯಾಡ್ಲರ್ ಹೇಳಿದರು. ಇನ್‌ಸ್ಟಾಗ್ರಾಂನ್ನು ಫೇಸ್‌ಬುಕ್‌ನಿಂದ ಯಾಕೆ ಬೇರ್ಪಡಿಸಬಾರದು ಎಂದು ಅವರು ಪ್ರಶ್ನಿಸಿದರು.

‘‘ಇನ್‌ಸ್ಟಾಗ್ರಾಂ ತನ್ನ ಪ್ರತಿಸ್ಪರ್ಧಿ ಹಾಗೂ ಅದು ತನ್ನ ವ್ಯಾಪಾರವನ್ನು ಎಗರಿಸಬಹುದು ಎಂಬುದಾಗಿ ಫೇಸ್‌ಬುಕ್ ಭಾವಿಸಿತು. ಅದರೊಂದಿಗೆ ಸ್ಪರ್ಧಿಸುವ ಬದಲು ಫೇಸ್‌ಬುಕ್ ಅದನ್ನು ಖರೀದಿಸಿತು. ಇದು ಸ್ಪರ್ಧಾ ವಿರೋಧಿ ಖರೀದಿಯಾಗಿದೆ ಹಾಗೂ ಇಂಥ ಪ್ರವೃತ್ತಿಯನ್ನು ತಡೆಯುವುದಕ್ಕಾಗಿಯೇ ಆ್ಯಂಟಿ ಟ್ರಸ್ಟ್ ಕಾನೂನನ್ನು ಜಾರಿಗೆ ತರಲಾಗಿದೆ’’ ಎಂದರು.

ಅಪಪ್ರಚಾರ, ದ್ವೇಷ ಭಾಷಣ ಪ್ರಸಾರದಿಂದ ಫೇಸ್‌ಬುಕ್‌ಗೆ ಲಾಭ

ಅಪಪ್ರಚಾರ, ದ್ವೇಷ ಭಾಷಣ ಮತ್ತು ಹಿಂಸಾತ್ಮಕ ಘಟನೆಗಳ ಪ್ರಸಾರದಿಂದ ಫೇಸ್‌ಬುಕ್ ಲಾಭ ಗಳಿಸುತ್ತಿದೆ ಎಂದು ಡೇವಿಡ್ ಸಿಸಿಲೈನ್ ಆರೋಪಿಸಿದರು. ಇಂತಹ ನಕಾರಾತ್ಮಕ ಸಂದೇಶಗಳ ಪ್ರಸಾರದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ ಹಾಗೂ ಹೆಚ್ಚು ಜನರಿಗೆ ತಲುಪುತ್ತವೆ. ಹಾಗಾಗಿ ಅವುಗಳು ಹೆಚ್ಚು ಲಾಭದಾಯಕ ಎಂದರು.

ಆದರೆ, ಇದನ್ನು ನಿರಾಕರಿಸಿದ ಝುಕರ್‌ಬರ್ಗ್, ಬಳಕೆದಾರರು ಇಂಥದನ್ನು ನೋಡಲು ಬಯಸುವುದಿಲ್ಲ ಎಂದರು.

‘‘ಇಂಥ ಅಪಪ್ರಚಾರ ಹರಡಲು ಅವಕಾಶ ಕೊಟ್ಟರೆ ಹಿಂಸೆಗೆ ಕಾರಣವಾಗಬಹುದು ಹಾಗೂ ಅದು ಅಮೆರಿಕದ ಪ್ರಜಾಸತ್ತೆಯ ಹೃದಯಕ್ಕೇ ಗುರಿಯಿಟ್ಟು ಹೊಡೆಯಬಹುದು’’ ಎಂದು ಸಿಸಿಲೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News