ರಾಜಸ್ಥಾನ ಸ್ಪೀಕರ್-ಸಿಎಂ ಪುತ್ರ ನಡುವಿನ ಸಂಭಾಷಣೆಯ ವೀಡಿಯೊ ವೈರಲ್

Update: 2020-07-31 07:24 GMT

   ಜೈಪುರ, ಜು.31:ಸ್ಪೀಕರ್ ಸಿಪಿ ಜೋಶಿ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ನಡೆದಿದೆ ಎನ್ನಲಾದ ಸಂಭಾಷಣೆಯ ವೀಡಿಯೊ ವೈರಲ್ ಆಗಿದ್ದು, ಸರಕಾರ ಉಳಿಸುವ ವಿಚಾರದಲ್ಲಿ ಜೋಶಿ ಅವರ ರಾಜಕೀಯ ಒಲವು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಬೇಡಿಕೆ ಇಟ್ಟಿದೆ.

ಒಂದು ವೇಳೆ 30 ಶಾಸಕರು ಪಕ್ಷ ತೊರೆದರೆ ಪರಿಸ್ಥಿತಿ ಕಷ್ಟಕರವಾಗುತ್ತದೆ ಎಂದು ಸ್ಪೀಕರ್ ಸಂಭಾಷಣೆಯ ವೇಳೆ ಹೇಳುತ್ತಿರುವುದು ಕೇಳಿಬಂದಿದೆ. ಈಗಾಗಲೇ ಸರಕಾರದ ವಿರುದ್ಧ ಬಂಡೆದ್ದಿರುವ ಸಚಿನ ಪೈಲಟ್ ಹಾಗೂ 18 ಶಾಸಕರ ಬಣ ತಮ್ಮಲ್ಲಿ 30 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು. ಒಂದು ವೇಳೆ 30 ಶಾಸಕರು ಪಕ್ಷವನ್ನು ತೊರೆದರೆ ಗೆಹ್ಲೋಟ್ ಸರಕಾರ ಅಲ್ಪಮತಕ್ಕೆ ಕುಸಿಯಲಿದೆ.

ನಮ್ಮಂದಿಗಿರುವ 30 ಶಾಸಕರು ತೊರೆದು ಹೋದರೆ ಏನೂ ಮಾಡಲು ಸಾಧ್ಯವಾಗದು. ಅವರು ಸರಕಾರವನ್ನು ಬೀಳಿಸಬಹುದು ಎಂದು ಸ್ಪೀಕರ್ ಹೇಳಿದರೆ, ಇದಕ್ಕೆ ಉತ್ತರವಾಗಿ ವೈಭವ್ ಅವರು, ರಾಜ್ಯಸಭಾ ಚುನಾವಣೆಗಿಂತ ಮೊದಲು ಇದೇ ಪರಿಸ್ಥಿತಿ ಎದುರಾಗಿತ್ತು ಎಂದರು. ರಾಜ್ಯಸಭಾ ಚುನಾವಣೆಗಿಂತ ಮೊದಲು ಕಾಂಗ್ರೆಸ್ ಶಾಸಕರನ್ನು ಹೊಟೇಲ್‌ಗೆ ಸ್ಥಳಾಂತರಿಸಲಾಗಿತ್ತು. ಆಗ ಬಂಡಾಯ ಶಾಸಕ ಪೈಲಟ್ ಬಣದ ಬಗ್ಗೆ ಮುಖ್ಯಮಂತ್ರಿ ಗೆಹ್ಲೋಟ್ ವೌನವಾಗಿದ್ದರು.

ವೈಭವ್ ಬುಧವಾರ ಜೋಶಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಅವರ ಮನೆಗೆ ತೆರಳಿದ್ದರು. ಜೋಶಿ ಅವರು ವೈಭವ್ ಅವರೊಂದಿಗೆ ಮಾತನಾಡಿರುವ ವೀಡಿಯೊ ಈಗ ವೈರಲ್ ಆಗಿದೆ.

"ವೀಡಿಯೊದಲ್ಲಿ ಪಕ್ಷಪಾತದಿಂದ ವರ್ತಿಸಿರುವ ಸ್ಪೀಕರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ಸ್ಪೀಕರ್ ಸಾಮಾನ್ಯ ವ್ಯಕ್ತಿಯೊಂದಿಗೆ ಮಾತನಾಡಿರುವುದಲ್ಲ. ಅವರು ಅಶೋಕ್ ಗೆಹ್ಲೋಟ್‌ರ ಮಗನೊಂದಿಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ತಲೆದೋರಿವು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಪೀಕರ್ ಪಕ್ಷಪಾತದಿಂದ ವರ್ತಿಸಬಾರದು. ಆದರೆ, ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಇದು ಅಸಾಂವಿಧಾನಿಕ. ಸ್ಪೀಕರ್ ರಾಜೀನಾಮೆ ನೀಡಬೇಕು'' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News